ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಕಾನೂನು ಅಸಂಭವ: ಹರ್ಯಾಣ ಸಿಎಂ ಖಟ್ಟರ್

Update: 2021-11-26 18:20 GMT

ಹೊಸದಿಲ್ಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಅದು ಸರಕಾರದ ಮೇಲೆ ಒತ್ತಡ ಹೇರುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಹೇಳಿದ್ದಾರೆ.

ಖಟ್ಟರ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರಕಾರ ರದ್ದುಗೊಳಿಸುವುದಾಗಿ ಘೋಷಿಸಿರುವ ಮೂರು ಕೃಷಿ ಕಾನೂನುಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ಉತ್ತಮ ಸಂದೇಶವನ್ನು ನೀಡಿದ್ದರೂ, ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನು ತರಲು ಸರಕಾರಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಖಟ್ಟರ್ ಹೇಳಿದರು.

ಸರಕಾರವು ಎಂಎಸ್‌ಪಿ ಕಾನೂನನ್ನು ತಂದರೆ ಎಲ್ಲಾ ಬೆಳೆಗಳನ್ನು ಖರೀದಿಸುವ ಒತ್ತಡಕ್ಕೆ ಸಿಲುಕುತ್ತದೆ. ಅದು ಸಾಧ್ಯವಿಲ್ಲ. ಹರ್ಯಾಣದಲ್ಲಿಯೇ ಒಂದು ಡಝನ್ ಬೆಳೆಗಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲಾಗುತ್ತದೆ ಎಂದು ಖಟ್ಟರ್ ಹೇಳಿದರು.

ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ನೇತೃತ್ವವಹಿಸಿರುವ ರೈತ ಸಂಘಗಳು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಅನುಮೋದಿಸಿವೆ. ಆದಾಗ್ಯೂ, ಬೆಳೆಗಳಿಗೆ ಎಂಎಸ್‌ಪಿ ಖಾತ್ರಿಗೆ ಕಾನೂನು ಸೇರಿದಂತೆ ಹಲವು ಬೇಡಿಕೆಗಳು ಬಾಕಿ ಉಳಿದಿವೆ ಎಂದು ಅವುಗಳು ಪ್ರತಿಪಾದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News