“ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ, ದಯವಿಟ್ಟು ಮನೆಗೆ ಹೋಗಿ": ರೈತರಿಗೆ ಕೃಷಿ ಸಚಿವರ ಮನವಿ

Update: 2021-11-27 08:16 GMT
Photo: twitter

ಹೊಸದಿಲ್ಲಿ: ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸುವ  ಎರಡು ದಿನಗಳ ಮೊದಲು ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶನಿವಾರ ಒತ್ತಾಯಿಸಿದರು.

"ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಯ ನಂತರ  ರೈತರ ಆಂದೋಲನವನ್ನು ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ತೋಮರ್ ಎಎನ್‌ಐಗೆ ತಿಳಿಸಿದರು.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ತೋಮರ್ ಮಂಡಿಸುವ ನಿರೀಕ್ಷೆಯಿದೆ. ಈ ದಿನದಂದು ಉಪಸ್ಥಿತರಿರುವಂತೆ ಲೋಕಸಭೆಯ ಸಂಸದರಿಗೆ ಬಿಜೆಪಿ ವಿಪ್ ಜಾರಿ ಮಾಡಿದೆ.

ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ತೋಮರ್ ಹೇಳಿದರು.

"ಪ್ರಧಾನಿ ನರೇಂದ್ರ ಮೋದಿ ಅವರು ಬೆಳೆ ವೈವಿಧ್ಯೀಕರಣ, ಶೂನ್ಯ ಬಜೆಟ್ ಕೃಷಿ ಹಾಗೂ  ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಹಾಗೂ  ಪರಿಣಾಮಕಾರಿಯಾಗಿ ಮಾಡುವ ವಿಷಯಗಳ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಇರುತ್ತಾರೆ " ಎಂದು ಕೃಷಿ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News