ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರವನ್ನು ನೊಯ್ಡಾ ಎಂದು ಬಿಂಬಿಸಿದ ಬಿಜೆಪಿ ನಾಯಕರನ್ನು ಟೀಕಿಸಿದ ಚೀನಾ ಮಾಧ್ಯಮ

Update: 2021-11-27 10:23 GMT
ಬೀಜಿಂಗ್‌ನ ಡೇಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Photo: Twitter)

ಹೊಸದಿಲ್ಲಿ: ಬೀಜಿಂಗ್‌ನ ಡೇಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಗಳನ್ನು ನೋಯ್ಡಾದ ಜೇವರ್ ಎಂಬಲ್ಲಿ ತಲೆಯೆತ್ತಲಿರುವ ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಗಳೆಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಲವಾರು ಬಿಜೆಪಿ ನಾಯಕರುಗಳು ಹಾಗೂ ಸಚಿವರನ್ನು ಚೀನಾದ ಸರಕಾರಿ ಸುದ್ದಿ ಸಂಸ್ಥೆ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ತರಾಟೆಗೆ ತೆಗೆದುಕೊಂಡಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ನ ಉದ್ಯೋಗಿ ಶೇನ್ ಶಿವೇಯ್ ಅವರು ಶುಕ್ರವಾರ ಬಿಜೆಪಿ ನಾಯಕರುಗಳು ಹಾಗೂ ಕೇಂದ್ರ ಸಚಿವರುಗಳ ಟ್ವೀಟ್‌ಗಳ ಕೊಲಾಜ್ ಒಂದನ್ನು ಪೋಸ್ಟ್ ಮಾಡಿ "ಭಾರತದ ಸರಕಾರಿ ಅಧಿಕಾರಿಗಳು ತಮ್ಮ ಸಾಧನೆಗಳಿಗೆ ಸಾಕ್ಷ್ಯವಾಗಿ ಚೀನಾದ ಬೀಜಿಂಗ್‌ನ ಡೇಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಗಳನ್ನು ಬಳಸಬೇಕಾಯಿತೆಂದು ತಿಳಿದು ಆಘಾತವಾಗಿದೆ,'' ಎಂದು ಬರೆದಿದ್ದಾರೆ.

ಕೇಂದ್ರ ಸಚಿವರುಗಳಾದ ಅನುರಾಗ್ ಠಾಕುರ್, ಪ್ರಹ್ಲಾದ್ ಸಿಂಗ್ ಪಟೇಲ್, ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಮ್ಮ ಟ್ವೀಟ್‌ಗಳಲ್ಲಿ ನೊಯ್ಡಾ ವಿಮಾನ ನಿಲ್ದಾಣದ್ದೆಂದು ಹೇಳಿಕೊಂಡು ಬೀಜಿಂಗ್‌ನ ವಿಮಾನ ನಿಲ್ದಾಣದ ಚಿತ್ರವನ್ನು ಬಳಸಿದ್ದರು.

ಶೇನ್ ಶಿವೇಯ್ ಅವರು ವಿಮಾನ ನಿಲ್ದಾಣದ ಚಿತ್ರದೊಂದಿಗೆ ಇನ್ನೊಂದು ಟ್ವೀಟ್ ಮಾಡಿ "ಚೀನಾದ ಬೀಜಿಂಗ್ ಡೇಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಗತ, 17.47 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಬೃಹತ್ ಯೋಜನೆ,'' ಎಂದು ಬರೆದಿದ್ದಾರೆ.

ಜೇವರ್ ವಿಮಾನ ನಿಲ್ದಾಣದ ವಿನ್ಯಾಸವಲ್ಲ, ಬದಲು ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರಗಳು ಎಂದು ಹೇಳುವ ಲೇಖನವನ್ನೂ ಅವರು ಪೋಸ್ಟ್ ಮಾಡಿದ್ದಾರೆ ಹಾಗೂ "ಭಾರತ ಸರಕಾರದ ನಕಲಿ ಸುದ್ದಿ ಪ್ರಚಾರ ಬಯಲಾಗಿದೆ,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News