ಮೂರೂ ಬಿಟ್ಟವನು ದೇಶಕ್ಕೆ ದೊಡ್ಡವನು....!

Update: 2021-11-28 10:24 GMT

ಚೌಕೀದಾರರು ಮೂರೂ ಕೃಷಿ ಕಾಯ್ದೆಗಳನ್ನು ಹಿಂದೆಗೆದಿರುವುದರಿಂದ ಚೌಕೀದಾರರ ಪರಮ ಭಕ್ತರಾಗಿರುವ ಬಸ್ಯನ ಮೇಲೆ ಅದ್ಯಾವ ಪರಿಣಾಮ ಬೀರಿರಬಹುದು ಎಂಬ ಕುತೂಹಲದಿಂದ ಪತ್ರಕರ್ತ ಎಂಜಲು ಕಾಸಿ ಹೆಗಲಿಗೆ ಜೋಳಿಗೆ ಹಾಕಿ ಭೇಟಿಗೆ ಹೊರಟ. ಬಸ್ಯ ಮನೆಯ ಹೊರಗೆ ಆಕಾಶ ನೋಡುತ್ತಾ ಕೂತಿದ್ದ.

‘‘ಬಸ್ಯ ಅವರೇ, ಚೌಕೀದಾರರು ಮೂರೂ ವಾಪಸ್ ತೆಗೆದು ಕೊಂಡರಂತಲ್ಲ...’’ ಕಾಸಿ ಕೇಳಿದ.

‘‘ಅದು ಚೌಕೀದಾರರ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ....ವಾಟ್ಸಪ್‌ನಲ್ಲಿ ಎಲ್ರೂ ಅವರ ನಿರ್ಧಾರವನ್ನು ಹೊಗಳುತ್ತಿದ್ದಾರೆ....ಗೊತ್ತಿಲ್ವಾ ನಿಮಗೆ?’’ ಗದ್ಗದ ಕಂಠದಲ್ಲಿ ಬಸ್ಯ ಹೇಳಿದ.

‘‘ಅದನ್ನು ಸಂತೋಷದಿಂದ ಹೇಳಬಾರದೆ...ಗದ್ಗದ ಕಂಠದಲ್ಲಿ ಯಾಕೆ?’’

‘‘ಚೌಕೀದಾರರು ರೈತರಿಗಾಗಿ ಮಾಡಿದ ತ್ಯಾಗಬಲಿದಾನ ಇದು. ತನ್ನ ನಿರ್ಧಾರಕ್ಕಿಂತ ರೈತರು ಮುಖ್ಯ ಎನ್ನುವುದನ್ನು ಇದರಿಂದ ತೋರಿಸಿಕೊಟ್ಟಿದ್ದಾರೆ. ಅದಕ್ಕೇ...ಗಂಟಲು ಕಟ್ಟಿದೆ’’ ಬಸ್ಯ ಕೆಮ್ಮಿ ಗಂಟಲು ಸರಿ ಪಡಿಸಿಕೊಂಡ.

‘‘ರೈತರು ಮುಖ್ಯ ಆಗಿದ್ದರೆ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡರು?’’ ಕಾಸಿ ಕೇಳಿದ.

‘‘ದೇಶದ ಹಿತಾಸಕ್ತಿಗಾಗಿ ತೆಗೆದುಕೊಂಡರು. ಆದರೆ ರೈತರ ಹಿತಾಸಕ್ತಿಗಾಗಿ ಅದನ್ನು ತ್ಯಾಗ ಮಾಡಿದರು...’’

‘‘ದೇಶದ ಹಿತಾಸಕ್ತಿ ಮತ್ತು ರೈತರ ಹಿತಾಸಕ್ತಿ ಒಂದೇ ಅಲ್ಲವೆ...ದೇಶ ಬೇರೆ, ರೈತರು ಬೇರೆಯೇ? ಹೋಗಲಿ ಇಷ್ಟು ಸಮಯ ತೆಗೆದುಕೊಂಡದ್ದು ಯಾಕೆ?’’ ಕಾಸಿ ಪ್ರಶ್ನಿಸಿದ. ‘‘ಅವರು ನಿಜವಾದ ರೈತರೋ ಅಲ್ಲವೋ ಎನ್ನುವುದು ಚೌಕೀದಾರರಿಗೆ ಮನವರಿಕೆಯಾಗಬೇಡವೇ? ಅದಕ್ಕಾಗಿ ಅವರು ಘೋರ ತಪಸ್ಸು ಮಾಡಿದರು. ತಪಸ್ಸಿನಲ್ಲಿ ಅವರಿಗೆ ಬೀದಿಯಲ್ಲಿರುವವರು ರೈತರು ಎನ್ನುವುದು ಜ್ಞಾನೋದಯವಾದ ಬಳಿಕ ಮೂರು ಕಾಯ್ದೆಯನ್ನು ಹಿಂದೆಗೆದುಕೊಂಡರು....ಆ ಮೂಲಕ ಅವರು ದೊಡ್ಡವರು ಎನಿಸಿಕೊಂಡರು...’’

‘‘ದೊಡ್ಡವರು ಎನ್ನಿಸಿಕೊಳ್ಳುವುದು ಹೇಗೆ?’’ ಕಾಸಿಗೆ ಅರ್ಥವಾಗಲಿಲ್ಲ.

‘‘ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಗಾದೆಯಿದೆಯಲ್ಲ? ಚೌಕೀದಾರರು ಅದಕ್ಕಾಗಿ ಮೂರು ಕಾಯ್ದೆಗಳನ್ನು ಕೈ ಬಿಟ್ಟು    ಧರೆಗೆ ದೊಡ್ಡವರಾದರು...’’

‘‘ಮೂರೂ ಬಿಟ್ಟವರು ಎಂದರೆ...ಮಾನ, ಮರ್ಯಾದೆ, ನಾಚಿಕೆ ಅಲ್ಲವೇ?’’

‘‘ಅದು ಬೇರೆ ಇದು ಬೇರೆ. ಇಲ್ಲಿ ಮೂರು ಕಾಯ್ದೆಯನ್ನು ಕೈ ಬಿಡದೇ ಇದ್ದರೆ ನಾಚಿಕೆ, ಮಾನ, ಮರ್ಯಾದೆ ಉಳಿಯುವುದಿಲ್ಲ ಎಂದು ಗೊತ್ತಾಗಿ ಅವರು ಬಿಟ್ಟರು. ಆದುದರಿಂದ ಅವರು ದೊಡ್ಡವರಾದರು...’’ ಬಸ್ಯ ಅರ್ಥ ಸಮೇತ ವಿವರಿಸಿದ.

‘‘ಅವರು ನಾಚಿಕೆ, ಮಾನ, ಮರ್ಯಾದೆಯನ್ನು ದೇಶಕ್ಕಾಗಿ ಅಂಬಾನಿ ಮತ್ತು ಅದಾನಿಯವರಿಗೆ ಯಾವತ್ತೋ ಮಾರಿದ್ದಾರೆ ಎಂದು ಹೇಳುತ್ತಾರಲ್ಲ....’’ ಕಾಸಿ ಕೆಣಕಿದ.

‘‘ನೋಡಿ, ಚೌಕೀದಾರರು ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಬಂದವರು. ಸ್ವತಃ ಧರ್ಮ ಪತ್ನಿಯನ್ನು ಕೂಡ. ಒಂದು ವೇಳೆ ಧರ್ಮ ಪತ್ನಿಯವರು ಇದ್ದಿದ್ದರೆ....’’ ಎಂದು ಬಸ್ಯ ಮಾತು ನಿಲ್ಲಿಸಿದ.

‘‘ಇದ್ದಿದ್ದರೆ...’’ ಕಾಸಿ ಕುತೂಹಲದಿಂದ ಕೇಳಿದ.

‘‘ಅದು ಮುಗಿದ ವಿಷಯ ಬಿಡಿ. ದೇಶ ಉಳಿಸುವುದಕ್ಕಾಗಿ ಎಲ್ಲವನ್ನೂ ಮಾರುತ್ತಿದ್ದಾರೆ. ತಮಗೆ ಸಿಕ್ಕಿದ ಪ್ರಶಸ್ತಿ, ಶಾಲು, ವಿದೇಶದಲ್ಲಿ ಸಿಕ್ಕಿದ ಉಡುಗೊರೆ ಎಲ್ಲವನ್ನು ಮಾರಿದ್ದಾರೆ. ಯಾವುದನ್ನೂ ಇಟ್ಟುಕೊಂಡಿಲ್ಲ. ಹೀಗಿರುವಾಗ ಒಳ್ಳೆಯ ಬೆಲೆ ಸಿಕ್ಕಿದರೆ ದೇಶಕ್ಕಾಗಿ ಮಾನ, ಮರ್ಯಾದೆ, ನಾಚಿಕೆಯನ್ನು ಮಾರಿದರೆ ಏನಾಯಿತು? ದೇಶಕ್ಕಾಗಿ ವಿರೋಧ ಪಕ್ಷದವರು ತಮ್ಮ ಮಾನ, ಮರ್ಯಾದೆಯನ್ನು ಅದಾನಿಗೆ, ಅಂಬಾನಿಗೆ ಮಾರಲು ಸಿದ್ಧರಿದ್ದಾರೆಯೇ? ಹೀಗಿರುವಾಗ ಚೌಕೀದಾರರು ದೇಶಕ್ಕಾಗಿ ಸತ್ಯ ಹರಿಶ್ಚಂದ್ರರಂತೆ ಎಲ್ಲವನ್ನು ಕೊಟ್ಟವರು....ರೈತರಿಗಾಗಿಯೂ ತಮ್ಮ ಮೂರನ್ನು ಬಿಟ್ಟು ದೇಶಕ್ಕೆ ಮಾದರಿಯಾಗಿದ್ದಾರೆ....’’

‘‘ಅವರು ದೇಶಕ್ಕಾಗಿ ಮೂರನ್ನು ಬಿಟ್ಟದ್ದಲ್ಲ, ಅದಾನಿ, ಅಂಬಾನಿಗಾಗಿ ಎನ್ನುವ ಆರೋಪವಿದೆಯಲ್ಲ....’’ ಕಾಸಿ ಪ್ರಶ್ನಿಸಿದ.

‘‘ ಅದಾನಿ, ಅಂಬಾನಿಯೇ ನಮ್ಮ ದೇಶ. ದೇಶವೇ ಅದಾನಿ, ಅಂಬಾನಿ. ಆದುದರಿಂದ ದೇಶಕ್ಕಾಗಿ ಬಿಟ್ಟರೂ, ಅವರಿಗಾಗಿ ಬಿಟ್ಟರೂ ಪರಿಣಾಮ ಒಂದೇ. ಮೂರು ಬಿಟ್ಟದ್ದರಿಂದ ದೇಶದ ಗೌರವ ಹೆಚ್ಚಿತು....’’

‘‘ಈಗ ಯಾಕೆ ನೀವು ಬೇಜಾರಿನಲ್ಲಿ ಕೂತಿರುವುದು?’’

‘‘ಅವರು ಬಿಟ್ಟದ್ದೇನೋ ಸರಿ. ಅವರ ಜೊತೆಗೆ ನಮ್ಮಂತಹ ಭಕ್ತರೂ ಮೂರೂ ಬಿಟ್ಟು ಓಡಾಡಬೇಕಾಯಿತಲ್ಲ ಎನ್ನುವುದೇ ದುಃಖ’’ ಎಂದವನೇ ಮನೆಯೊಳಗೆ ಸೇರಿ ಬಾಗಿಲು ಹಾಕಿಕೊಂಡ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News