ಮೂವರು ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ; 'ಜೈ ಶ್ರೀರಾಂ' ಹೇಳಲು ಬಲವಂತ; ಆರೋಪ

Update: 2021-11-28 07:06 GMT
ಸಾಂದರ್ಭಿಕ ಚಿತ್ರ

ರಾಂಚಿ: ಮೂವರು ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳು ಬಲವಂತವಾಗಿ ಅವರಿಂದ 'ಜೈಶ್ರೀರಾಂ' ಹಾಗೂ 'ಪಾಕಿಸ್ತಾನ ಮುರ್ದಾಬಾದ್' ಘೋಷಣೆಗಳನ್ನು ಕೂಗಿಸಿದ ಘಟನೆ ನಡೆದಿದೆ ಎಂದು The Indian Express ವರದಿ ಮಾಡಿದೆ.

ಈ ಸಂಬಂಧ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ರಾಂಚಿಯಲ್ಲಿ ಎರಡು ವಾರದಲ್ಲಿ ನಡೆದ ಎರಡನೇ ಇಂಥ ಘಟನೆಯಾಗಿದೆ.

"ನಗರದಲ್ಲಿ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಇಂಥ ಎರಡು ಹಲ್ಲೆಗಳು ನಡೆದಿರುವ ಹಿನ್ನೆಲೆಯಲ್ಲಿ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ" ಎಂದು ಹಿರಿಯ ಎಸ್ಪಿ ಸುರೇಂದ್ರ ಝಾ ಹೇಳಿದ್ದಾರೆ.

ರಾಂಚಿಯಲ್ಲಿ ಚಳಿಗಾಲದ ಉಡುಗೆಗಳನ್ನು ಮಾರಾಟ ಮಾಡುವ ರಿಝ್ವಾನ್ ಅಹ್ಮದ್ ವಾನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ರಾಂಚಿಯ ಹಮ್ರು ಪ್ರದೇಶಕ್ಕೆ ಹೋಗುತ್ತಿದ್ದಾಗ ಸುಮಾರು 25 ಮಂದಿ ವಾನಿ ಹಾಗೂ ಅವರ ಇಬ್ಬರು ಸ್ನೇಹಿತರನ್ನು ಸುತ್ತುವರಿದಿದ್ದಾರೆ. ಈ ಕಿಡಿಗೇಡಿಗಳು, ಇವರನ್ನು 'ಜೈ ಶ್ರೀರಾಂ' ಘೋಷಣೆ ಕೂಗುವಂತೆ ಮತ್ತು 'ಪಾಕಿಸ್ತಾನ್ ಮುರ್ದಾಬಾದ್' ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿತು ಎಂದು ದೂರಿನಲ್ಲಿ ವಿವರಿಸಲಾಗಿದೆ.

"ನನ್ನ ತಲೆಗೆ ರಾಡ್‌ನಿಂದ ಹೊಡೆಯಲಾಯಿತು. ನಾನು ಧರಿಸಿದ್ದ ಹೆಲ್ಮೆಟ್ ಒಡೆದು ಹೋಗಿದೆ. ನನ್ನ ಇಬ್ಬರು ಸ್ನೇಹಿತರಿಗೂ ಗಾಯಗಳಾಗಿವೆ. ಬೈಕ್‌ಗೆ ಹಾನಿಯಾಗಿದ್ದು, ನಮ್ಮಲ್ಲಿದ್ದ ವಸ್ತುಗಳನ್ನು ಗುಂಪು ಲೂಟಿ ಮಾಡಿತು" ಎಂದು ಹೇಳಿದ್ದಾರೆ. ಆದರೆ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದು, ಇನ್ನೂ ಸಾಬೀತಾಗಿಲ್ಲ ಎಂದು ರಾಂಚಿಯ ಡಿವೈಎಸ್ಪಿ ಪ್ರಭಾತ್ ರಂಜನ್ ಹೇಳಿದ್ದಾಗಿ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ. ರಾಂಚಿಯಲ್ಲಿರುವ ಕಾಶ್ಮೀರಿ ವ್ಯಾಪಾರಿಗಳಿಗೆ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಅವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News