ನನಗೆ ಅಧಿಕಾರ ಬೇಕಿಲ್ಲ, ಜನತೆಯ ಸೇವೆ ಮಾಡಲು ಬಯಸುತ್ತೇನೆ: 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ

Update: 2021-11-28 09:28 GMT
ಪ್ರಧಾನಿ ಮೋದಿ (File Photo: PTI)

ಹೊಸದಿಲ್ಲಿ,ನ.28: ‘ನನಗೆ ಅಧಿಕಾರ ಬೇಕಿಲ್ಲ, ನಾನು ಜನತೆಯ ಸೇವೆ ಮಾಡಲು ಬಯಸುತ್ತೇನೆ’ ಎಂದು ಪ್ರಧಾನಿ ಮೋದಿ ಅವರು ರವಿವಾರ ಹೇಳಿದರು.

ತನ್ನ ಮಾಸಿಕ ರೇಡಿಯೊ ಭಾಷಣ ಕಾರ್ಯಕ್ರಮ 'ಮನ್ ಕಿ ಬಾತ್' ನ 83ನೇ ಆವೃತ್ತಿಯಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯು ಬಡವರಿಗೆ ಆರೋಗ್ಯ ರಕ್ಷಣೆ ಸೌಲಭ್ಯಗಳನ್ನು ಪಡೆಯಲು ನೆರವಾಗುತ್ತಿದೆ ಎಂದರು.

ತನ್ನ ಭಾಷಣದಲ್ಲಿ ಭಾರತದ ಸ್ಟಾರ್ಟ್ ಅಪ್ ಗಳ ಕುರಿತು ಮಾತನಾಡಿದ ಮೋದಿ, ಪ್ರಕೃತಿಯ ರಕ್ಷಣೆಗೆ ಒತ್ತು ನೀಡಿದರಲ್ಲದೆ ಸಶಸ್ತ್ರ ಪಡೆಗಳಿಗೆ ಗೌರವಗಳನ್ನೂ ಸಲ್ಲಿಸಿದರು.

ಭಾರತದಲ್ಲಿ ಸ್ಟಾರ್ಟ್ ಅಪ್ ಸಂಸ್ಕೃತಿಯ ಕುರಿತು ಮಾತನಾಡಿದ ಅವರು, ನಾವಿಂದು ಭಾರತದ ಬೆಳವಣಿಗೆಯ ಪಥದಲ್ಲಿ ತಿರುವಿನ ಹಂತದಲ್ಲಿದ್ದೇವೆ. ಯುವಜನರು ಉದ್ಯೋಗದ ಆಕಾಂಕ್ಷಿಗಳು ಮಾತ್ರವಲ್ಲ, ಉದ್ಯೋಗಗಳ ಸೃಷ್ಟಿಕರ್ತರೂ ಆಗಿದ್ದಾರೆ. ಭಾರತದಲ್ಲಿ ಒಂದು ಶತಕೋಟಿ ಡಾ.ಗೂ ಹೆಚ್ಚಿನ ಮೌಲ್ಯದ 70ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳಿವೆ ಎಂದು ಹೇಳಿದರು.

‘ಇನ್ನೆರಡು ದಿನಗಳಲ್ಲಿ ಡಿಸೆಂಬರ್ ತಿಂಗಳು ಆರಂಭವಾಗಲಿದೆ. ದೇಶವು ನೌಕಾಪಡೆ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಿದೆ. ಡಿ.16ರಂದು ದೇಶವು 1971ರ ಯುದ್ಧದ ಸುವರ್ಣ ವರ್ಷವನ್ನೂ ಆಚರಿಸಲಿದೆ ಎನ್ನುವುದು ನಮಗೆ ತಿಳಿದಿದೆ. ಈ ಸಂದರ್ಭದಲ್ಲಿ ನಮ್ಮ ಸಶಸ್ತ್ರ ಪಡೆಗಳನ್ನು ಸ್ಮರಿಸಿಕೊಳ್ಳಲು ನಾನು ಬಯಸುತ್ತೇನೆ’ ಎಂದರು.

ಹಿಂದಿನ 'ಮನ್ ಕಿ ಬಾತ್' ಕಾರ್ಯಕ್ರಮಗಳಂತೆ ಪ್ರಕೃತಿ ರಕ್ಷಣೆಯ ಮಹತ್ವಕ್ಕೆ ಒತ್ತು ನೀಡಿದ ಮೋದಿ, ‘ಪ್ರಕೃತಿಯ ಸಮತೋಲನವನ್ನು ನಾವು ಕೆಡಿಸಿದಾಗ ಅಥವಾ ಅದರ ಶುದ್ಧತೆಯನ್ನು ಹಾಳು ಮಾಡಿದಾಗ ಮಾತ್ರ ಅದು ನಮಗೆ ಬೆದರಿಕೆಯನ್ನು ಒಡ್ಡುತ್ತದೆ’ ಎಂದರು. ದೇಶಾದ್ಯಂತ ಸಮುದಾಯಗಳು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಶ್ರಮಿಸಿದ ಉದಾಹರಣೆಗಳನ್ನು ಅವರು ಪ್ರಮುಖವಾಗಿ ಬಿಂಬಿಸಿದರು.

ತನ್ನ ಭಾಷಣದ ಅಂತ್ಯದಲ್ಲಿ ಮೋದಿ, ಕೋವಿಡ್ ಸಾಂಕ್ರಾಮಿಕವು ಇನ್ನೂ ಮುಗಿದಿಲ್ಲ ಮತ್ತು ಜನರು ಎಚ್ಚರಿಕೆಯಿಂದ ಇರಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News