ಗುಲ್ಬರ್ಗ್ ಸೊಸೈಟಿ ನರಮೇಧ: ಇನ್ನೂ ಮೂವರು ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ಗುಜರಾತ್ ಹೈಕೋರ್ಟ್

Update: 2021-11-28 10:45 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್,ನ.28: ಗುಜರಾತ್ ಉಚ್ಚ ನ್ಯಾಯಾಲಯವು 2002ರ ಗುಜರಾತ್ ದಂಗೆಗಳ ಸಂದರ್ಭ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ನರಮೇಧ ಪ್ರಕರಣದಲ್ಲಿಯ ಉಳಿದ ಮೂವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದೆ ಮತ್ತು ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಆರೋಪಿಗಳ ಮೇಲ್ಮನವಿಗಳು ತನ್ನ ಮುಂದೆ ವಿಚಾರಣೆಗೆ ಬಾಕಿಯಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ನ.25ರಂದು ಆದೇಶಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಎಲ್ಲ ಆರೋಪಿಗಳು ತಮ್ಮ ಮೇಲ್ಮನವಿಗಳು ವಿಚಾರಣೆಗೆ ಬಾಕಿ ಇರುವಂತೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ಮೂವರು ಆರೋಪಿಗಳಾದ ಯೋಗೇಂದ್ರಸಿನ್ಹ ಅಲಿಯಾಸ್ ಲಾಲು ಶೇಖಾವತ್, ಭರತ ತೇಲಿ ಭಲೋದಿಯಾ ಮತ್ತು ಕೃಷ್ಣಕುಮಾರ ಕಲಾಲ್ ಅವರು ತಮ್ಮ ಶಿಕ್ಷೆಯ ಅಮಾನತು ಮತ್ತು ಜಾಮೀನು ಬಿಡುಗಡೆ ಕೋರಿ 2020 ಮತ್ತು 2021ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದರು.
2016, ಜೂನ್ ನಲ್ಲಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆಗೊಳಗಾದ 11 ಜನರು ಸೇರಿದಂತೆ ಒಟ್ಟು 24 ಜನರನ್ನು ಪ್ರಕರಣದಲ್ಲಿ ದೋಷಿಗಳೆಂದು ಘೋಷಿಸಿತ್ತು.

ಮೂವರು ದೋಷಿಗಳ ಪರ ವಕೀಲ ಕ್ಷಿತಿಜ ಅಮೀನ್ ಅವರು, ಶೇಖಾವತ್ ಮತ್ತು ಭಲೋದಿಯಾ ಅವರ ಪಾತ್ರಗಳು ಇತರ ದೋಷಿಗಳಾದ ಲಖನಸಿನ್ಹ ಅಲಿಯಾಸ ಲಖಿಯೊ ಭುರಿಯೊ ಲಾಲುಭಾ ಚೂಡಾಸಮ ಮತ್ತು ದಿನೇಶ ಪ್ರಭುದಾಸ ಶರ್ಮಾ ಅವರ ಪಾತ್ರಗಳಿಗೆ ಹೋಲಿಸಿದರೆ ಕಡಿಮೆ ಗುರುತರವಾಗಿವೆ ಮತ್ತು ಹೆಚ್ಚು ಕಡಿಮೆ ಇನ್ನೋರ್ವ ದೋಷಿ ಭರತ ಲಕ್ಷಣಸಿನ್ಹ ರಜಪೂತ್ ಪಾತ್ರಕ್ಕೆ ಸಮನಾಗಿವೆ. ಉಚ್ಚ ನ್ಯಾಯಾಲಯವು ಈಗಾಗಲೇ ಈ ಮೂವರ ಶಿಕ್ಷೆಯನ್ನು ಅಮಾನತುಗೊಳಿಸಿರುವುದರಿಂದ ಹಾಲಿ ಮೂವರು ಅರ್ಜಿದಾರರಿಗೂ ಮೇಲ್ಮನವಿಗಳ ವಿಚಾರಣೆ ಬಾಕಿಯಿರುವಂತೆ ಜಾಮೀನು ನೀಡಬೇಕು ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ.ಜೆ.ದೇಸಾಯಿ ಮತ್ತು ಸಮೀರ ದವೆ ಅವರ ಪೀಠದ ಎದುರು ವಾದ ಮಂಡಿಸಿದ್ದರು.

ಕಲಾಲ್ ಪ್ರಕರಣದಲ್ಲಿ ಅಪರಾಧದಲ್ಲಿ ಆತನ ಪಾತ್ರವು ಈಗಾಗಲೇ ಜಾಮೀನು ಬಿಡುಗಡೆಗೊಂಡಿರುವ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಲ್ಪಟ್ಟಿರುವ ಇತರ ಸಹ ಆರೋಪಿಗಳ ಪಾತ್ರಗಳಿಗೆ ಹೆಚ್ಚುಕಡಿಮೆ ಸಮವಾಗಿದೆ ಎಂದು ಹೇಳಿದ ಅಮೀನ್, ಕಲಾಲ್ ಕುಡುಗೋಲಿನೊಂದಿಗೆ ಸೊಸೈಟಿಗೆ ನುಗ್ಗಿದ್ದ ಮತ್ತು ಶಸ್ತ್ರಸಜ್ಜಿತ ಗುಂಪಿನ ಭಾಗವಾಗಿದ್ದ ಎಂಬ ಸಾಕ್ಷಿಯ ಹೇಳಿಕೆಗಳನ್ನು ಇತರ ಸಾಕ್ಷಿಗಳು ಬೆಂಬಲಿಸಿಲ್ಲ ಎಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News