ತ್ರಿಪುರಾ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ ಜಯಭೇರಿ

Update: 2021-11-28 11:32 GMT
ಸಾಂದರ್ಭಿಕ ಚಿತ್ರ (PTI)

ಅಗರ್ತಲ: ತ್ರಿಪುರಾದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಅಧಿಕಾರಾರೂಢ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಅಗರ್ತಲ ಮಹಾನಗರ ಪಾಲಿಕೆ ಸೇರಿದಂತೆ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಕ್ಲೀನ್‍ಸ್ವೀಪ್ ಸಾಧನೆ ಮಾಡಿದೆ.

ರಾಜ್ಯಾದ್ಯಂತ 14 ನಗರ ಸ್ಥಳೀಯ ಸಂಸ್ಥೆಗಳ 222 ಸ್ಥಾನಗಳ ಪೈಕಿ ಬಿಜೆಪಿ 217ರಲ್ಲಿ ಜಯ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದ್ದ ಸಿಪಿಐ(ಎಂ) ಈ ಬಾರಿ ಕೇವಲ ಮೂರು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಕೈಲಾಶ್‍ಶಹರ್ ಮತ್ತು ಅಂಬಾಸ್ಸಾ ಪುರಸಭೆಗಳು ಮತ್ತು ಪಣಿಸಾಗರ ನಗರ ಪಂಚಾಯ್ತಿ ಸ್ಥಾನಗಳನ್ನು ಸಿಪಿಐಎಂ ಗೆದ್ದುಕೊಂಡಿದೆ. ಅಗರ್ತಲ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಳಿಕ ಎರಡನೇ ಗರಿಷ್ಠ ಮತಗಳನ್ನು ಗಳಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್, ಅಂಬಾಸಾ ನಗರ ಪಂಚಾಯ್ತಿಯಲ್ಲಿ ಒಂದು ಸ್ಥಾನವನ್ನಷ್ಟೇ ಗಳಿಸಿಕೊಂಡಿದೆ. ತ್ರಿಪುರಾ ರಾಜ ಸಿಯೋನ್ ಪ್ರದ್ಯೋತ್ ಕಿಶೋರ್ ನೇತೃತ್ವದ ಟಿಐಪಿಆರ್‍ಎ ಮೊಹ್ತಾ ಒಂದು ಸ್ಥಾನವನ್ನು ಗೆದ್ದಿದೆ.

ರಾಜ್ಯದ 20 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 14ಕ್ಕೆ ಚುನಾವಣೆ ಈ ತಿಂಗಳ 25ರಂದು ನಡೆದಿತ್ತು. ರಾಜ್ಯದ ಒಟ್ಟು 324 ಸ್ಥಾನಗಳ ಪೈಕಿ ಬಿಜೆಪಿ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಉಳಿದ 222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲ ಶೇಕಡ 81.54ರಷ್ಟು ಮತದಾನವಾಗಿದೆ.

ಬಿಜೆಪಿಯ ಕ್ಲೀನ್‍ಸ್ವೀಪ್‍ನೊಂದಿಗೆ ಇದೇ ಮೊದಲ ಬಾರಿಗೆ ಅಗರ್ತಲ ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ.

"ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂನ ಪಿತೂರಿಗಳಿಗೆ ಕಿವಿಗೊಡದೇ ಜನ ಅವರ ವಿರುದ್ಧ ಮತ ಚಲಾಯಿಸಿದ್ದಾರೆ" ಎಂದು ತ್ರಿಪುರಾ ಐಸಿಎ ಸಚಿವ ಸಶಾಂತ ಚೌಧರಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News