ತಮ್ಮದೇ ಸರಕಾರ ಕರೆದ ಸರ್ವ ಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು

Update: 2021-11-28 12:11 GMT
Photo: PTI

ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ತಮ್ಮದೇ ಸರ್ಕಾರ ರವಿವಾರ ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾದರು. ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಹಾಜರಿದ್ದರು.

"ಪ್ರಧಾನಿ ಸಭೆಯಲ್ಲಿ ಭಾಗವಹಿಸಿ ಒಂದಷ್ಟು ವಿಷಯವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಸರ್ಕಾರ ವಾಪಾಸು ಪಡೆಯಲು ಉದ್ದೇಶಿಸಿರುವ ಮೂರು ಕೃಷಿ ಕಾಯ್ದೆಗಳು ಇನ್ನೊಂದು ರೂಪದಲ್ಲಿ ಮತ್ತೆ ಬರುತ್ತವೆ ಎಂಬ ಸಂದೇಹಗಳು ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಳಬೇಕೆಂದುಕೊಂಡಿದ್ದೆವು" ಎಂದು ರಾಜ್ಯಸಭೆಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆಯ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ತೈಲ ಬೆಲೆ ಏರಿಕೆ ಮತ್ತು ಚೀನಾ ಜತೆಗಿನ ಸಂಘರ್ಷ ಪರಿಸ್ಥಿತಿ ಬಗ್ಗೆಯೂ ಪಕ್ಷ ಸಭೆಯಲ್ಲಿ ಪ್ರಸ್ತಾವಿಸಿತು.

ಮೋದಿ ಇಂದಿನ ಸಭೆಗೆ ಗೈರು ಹಾಜರಾಗುವ ಮೂಲಕ, ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಬೇಕು ಎಂಬ ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅಲ್ಲಗಳೆದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ, "ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವ ಸಂಪ್ರದಾಯ ಇರಲಿಲ್ಲ. ಇದನ್ನು ಆರಂಭಿಸಿದವರೇ ಮೋದಿಯವರು. ಆದರೆ ಇಂದಿನ ಸಭೆಯಲ್ಲಿ ಅವರು ಭಾಗವಹಿಸಲು ಆಗುತ್ತಿಲ್ಲ" ಎಂದು ಜೋಶಿ ಹೇಳಿದರು.

31 ಪಕ್ಷಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದವು. ಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ಆರೋಪದಲ್ಲಿ ಎಎಪಿ ಮುಖಂಡ ಸಂಜಯ್ ಸಿಂಗ್ ಸಭಾತ್ಯಾಗ ಮಾಡಿದರು.

ಕನಿಷ್ಠ ಬೆಂಬಲಬೆಲೆಗೆ ಸಂಬಂಧಿಸಿದಂತೆ ಶಾಸನಾತ್ಮಕ ನಿರ್ಣಯ ತರುವ ನಿಟ್ಟಿನಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ವೈಎಸ್‍ಆರ್ ಕಾಂಗ್ರೆಸ್ ಸಭೆಯಲ್ಲಿ ಆಗ್ರಹ ಮಂಡಿಸಿತು. ಉತ್ತರಪ್ರದೇಶ ಲಖೀಮ್‍ಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ ಗೃಹಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಮದು ಬಹುತೇಕ ಎಲ್ಲ ವಿರೋಧ ಪಕ್ಷಗಳು ಆಗ್ರಹಿಸಿದವು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News