ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಪಂದ್ಯದಲ್ಲಿ ಶತಕ, ಅರ್ಧಶತಕ ಸಿಡಿಸಿ ದಾಖಲೆ ಬರೆದ ಶ್ರೇಯಸ್ ಅಯ್ಯರ್

Update: 2021-11-28 13:19 GMT
ಶ್ರೇಯಸ್ ಅಯ್ಯರ್ (Photo: Twitter/@BCCI)

ಕಾನ್ಪುರ: ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧಿಸಿದ್ದ ಭಾರತದ ಉದಯೋನ್ಮುಖ ಆಟಗಾರ ಶ್ರೇಯಸ್ ಅಯ್ಯರ್ ಎರಡನೇ ಇನಿಂಗ್ಸ್ ನಲ್ಲೂ ಅದ್ಭುತ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿ 65 ರನ್ ಸಿಡಿಸುವ ಮೂಲಕ ಪಂದ್ಯದ ಮೇಲೆ ಭಾರತ ತನ್ನ ಹಿಡಿತ ಬಿಗಿಗೊಳಿಸಲು ನೆರವಾದರು.

ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಶತಕ ಹಾಗೂ ಎರಡನೇ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ ಮೊಟ್ಟಮೊದಲ ಆಟಗಾರ ಎನಿಸಿಕೊಂಡ ಅಯ್ಯರ್, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಈ ಸಾಧನೆ ಮಾಡಿದ ಭಾರತದ 16ನೇ ಆಟಗಾರ ಎನಿಸಿಕೊಂಡಿದ್ದರು.

ಪ್ರವಾಸಿ ತಂಡವನ್ನು 296 ರನ್‍ಗಳಿಗೆ ನಿಯಂತ್ರಿಸಿದ ಭಾರತ ಮೊದಲ ಇನಿಂಗ್ಸ್ ನಲ್ಲಿ 49 ರನ್‍ಗಳ ಮುನ್ನಡೆ ಸಾಧಿಸಿತ್ತು. ಆದರೆ ನಾಲ್ಕನೇ ದಿನ ಭಾರತದ ಅಗ್ರ ಕ್ರಮಾಂಕ ಟಿಮ್ ಸೌಥಿ ಮತ್ತು ಕೈಲ್ ಜೆಮಿಸನ್ ಅವರ ಮೊನಚಿನ ದಾಳಿಯಿಂದಾಗಿ ದಯನೀಯ ವೈಫಲ್ಯ ಕಂಡು ಒಂದು ಹಂತದಲ್ಲಿ 51 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ರವಿಚಂದ್ರನ್ ಅಶ್ವಿನ್ ಜತೆಗೆ 52 ರನ್‍ಗಳ ಜತೆಯಾಟ ಪ್ರದರ್ಶಿಸುವ ಮೂಲಕ ಭಾರತದ ಒಟ್ಟಾರೆ ಮುನ್ನಡೆ 150ರ ಗಡಿ ದಾಟಿಸುವಲ್ಲಿ ಅಯ್ಯರ್ ಯಶಸ್ವಿಯಾದರು.

ಅಶ್ವಿನ್ ನಿರ್ಗಮನದ ಬಳಿಕ ಶ್ರೇಯಸ್, ವಿಕೆಟ್‍ಕೀಪರ್ ವೃದ್ಧಮಾನ್ ಸಹಾ ಜತೆ ಎಚ್ಚರಿಕೆಯ ಆಟವಾಡಿದರು. ಸ್ಪಿನ್ನರ್‍ಗಳ ವಿರುದ್ಧ ಲೆಕ್ಕಾಚಾರದ ರಿಸ್ಕ್ ತೆಗೆದುಕೊಂಡು ಬೌಂಡರಿಗಳನ್ನು ಬಾರಿಸಿದರು. 50 ರನ್ ಗಡಿ ದಾಟಿದ ಅಯ್ಯರ್, ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಶತಕ ಹಾಗೂ ಎರಡನೇ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ ಮೊಟ್ಟಮೊದಲ ಆಟಗಾರ ಎನಿಸಿಕೊಂಡರು. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಅಯ್ಯರ್, ಈ ಸಾಧನೆ ಮಾಡಿದ ಭಾರತದ 16ನೇ ಆಟಗಾರ ಎನಿಸಿಕೊಂಡಿದ್ದರು.

ಎರಡನೇ ಇನಿಂಗ್ಸ್ ನಲ್ಲಿ ಸೌಥಿಯವರ ಶಾರ್ಟ್‍ಬಾಲ್‍ಗೆ ಗ್ಲೌಸ್ ತಗುಲಿಸುವ ಮೂಲಕ 67 ರನ್‍ಗಳಾಗಿದ್ದಾಗ ಅಯ್ಯರ್ ಪೆವಿಲಿಯನ್‍ಗೆ ವಾಪಸ್ಸಾದರು. ಆದರೆ ಆ ವೇಳೆಗೆ ಸಹಾ ಜತೆಗೆ 64 ರನ್ ಸೇರಿಸಿದ್ದ ಅವರು ಭಾರತದ ಮುನ್ನಡೆಯನ್ನು 200ರ ಗಡಿ ದಾಟಿಸಿದ್ದರು. 8 ಆಕರ್ಷಕ ಬೌಂಡರಿ ಹಾಗೂ ಒಂದು ಸಿಕ್ಸ್ ಸಿಡಿಸಿದ ಅಯ್ಯರ್ ಪ್ರಬುದ್ಧ ಆಟ ಪ್ರದರ್ಶಿಸಿದರು. ಹಿರಿಯ ಆಟಗಾರರಾದ ರಹಾನೆ, ಪೂಜಾರ ವೈಫಲ್ಯ ಕಂಡರು. ಅಯ್ಯರ್ ಅವರ ಅದ್ಭುತ ಆಟದಿಂದಾಗಿ ಎರಡನೇ ಟೆಸ್ಟ್ ಗೆ ನಾಯಕ ವಿರಾಟ್ ಕೊಹ್ಲಿ ಆಗಮಿಸುವಾಗ ತಂಡದಿಂದ ಯಾರನ್ನು ಕೈಬಿಡಬೇಕು ಎನ್ನುವುದು ತಂಡಕ್ಕೆ ತಲೆ ನೋವು ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News