ಭಾರತಕ್ಕೆ ಸ್ವಾತಂತ್ರ್ಯ ಕುರಿತು ಕಾಂಗ್ರೆಸ್ ತಪ್ಪು ಇತಿಹಾಸ ಬೋಧಿಸಿತ್ತು: ಮಧ್ಯಪ್ರದೇಶ ಸಿಎಂ ಚೌಹಾಣ್

Update: 2021-11-28 13:28 GMT
 ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (PTI)

ಭೋಪಾಲ: ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರ ಕೊಡುಗೆಗಳಿಂದಾಗಿಯೇ ದೇಶವು ಸ್ವತಂತ್ರಗೊಂಡಿತ್ತು ಎಂದು ಹೇಳುವ ಮೂಲಕ ಕಾಂಗ್ರೆಸ್ ಜನರಿಗೆ ತಪ್ಪು ಇತಿಹಾಸವನ್ನು ಬೋಧಿಸಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆರೋಪಿಸಿದ್ದಾರೆ.

ಶನಿವಾರ ಬುಡಕಟ್ಟು ಕ್ರಾಂತಿಕಾರಿ ತಾಂತ್ಯಾ ಭಿಲ್ ಅಲಿಯಾಸ್ ತಾಂತ್ಯಾ ಮಾಮಾ ಅವರ ಜನ್ಮಸ್ಥಳ ಬರೋಡಾ ಅಹೀರ್ನಲ್ಲಿ ಗೌರವ ಕಲಶ ಯಾತ್ರಾಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಚೌಹಾಣ್, ‘ನಮಗೆ ಸರಿಯಾದ ಇತಿಹಾಸವನ್ನು ಬೋಧಿಸಲಾಗಿಲ್ಲ. ಮಹಾತ್ಮಾ ಗಾಂಧೀಜಿ, ನೆಹರು ಮತ್ತು ಇಂದಿರಾ ಅವರಿಂದಾಗಿ ಮಾತ್ರ ನಮಗೆ ಸ್ವಾತಂತ್ರ್ಯ ಲಭಿಸಿತ್ತು ಎಂದು ನಮಗೆ ಹೇಳಲಾಗಿತ್ತು. ನಾನು ಮಹಾತ್ಮಾ ಗಾಂಧಿಯವರಿಗೆ ವಂದಿಸುತ್ತೇನೆ, ಅವರು ವಿಶ್ವಬಂಧುವಾಗಿದ್ದರು. ಆದರೆ ಕಾಂಗ್ರೆಸ್ ನಮಗೆ ತಪ್ಪು ಇತಿಹಾಸವನ್ನು ಕಲಿಸಿತ್ತು’ ಎಂದರು.

ತಾಂತ್ಯಾ ಮಾಮಾ, ರಾಣಿ ಲಕ್ಷ್ಮೀಬಾಯಿ, ನಾನಾಸಾಹೇಬ ಪೇಶ್ವೆ. ಭೀಮಾ ನಾಯಕ್, ರಘುನಾಥ ಶಾ, ಬಿರ್ಸಾ ಮುಂಡಾ ಮತ್ತು ಇತರ ಹಲವಾರು ಕ್ರಾಂತಿಕಾರಿಗಳ ಜೀವನ ಮತ್ತು ಪಾತ್ರಗಳ ಬಗ್ಗೆ ಜನರಿಗೆಂದೂ ಬೋಧಿಸಲಾಗಿಲ್ಲ ಎಂದರು.

ತಾಂತ್ಯಾ ಮಾಮಾ ಲೇವಾದೇವಿದಾರರ ಶೋಷಣೆಯ ವಿರುದ್ಧ ಹೋರಾಡಿದ್ದರು ಮತ್ತು ಬ್ರಿಟಿಷರ ವಿರುದ್ಧ ಸಶಸ್ತ್ರ ಕಾಳಗದ ನೇತೃತ್ವ ವಹಿಸಿದ್ದರು. ಅವರು ಬ್ರಿಟಿಷ್ ಸರಕಾರದ ಖಜಾನೆಗಳನ್ನು ದೋಚುತ್ತಿದ್ದರು ಮತ್ತು ಸಂಪತ್ತನ್ನು ಬಡವರಿಗೆ ಹಂಚುತ್ತಿದ್ದರು ಎಂದ ಅವರು, ಬ್ರಿಟಿಷರು ತಾಂತ್ಯಾ ಮಾಮಾರನ್ನು ವಂಚನೆಯ ಮೂಲಕ ಸೆರೆ ಹಿಡಿದಿದ್ದರು ಮತ್ತು ಜಬಲಪುರ ಜೈಲಿನಲ್ಲಿ ನೇಣಿಗೇರಿಸಿದ್ದರು. ಬಿಜೆಪಿ ಸರಕಾರವು ತಾಂತ್ಯಾ ಮಾಮಾರ ಸರಿಯಾದ ಇತಿಹಾಸವನ್ನು ಬೋಧಿಸಲಿದೆ ಎಂದರು.

ಕಾಂಗ್ರೆಸ್ ಪಕ್ಷವು ಬುಡಕಟ್ಟು ವಿವಿಗೆ ಬುಡಕಟ್ಟು ಸಮುದಾಯಗಳ ಕ್ರಾಂತಿಕಾರಿಗಳ ಬದಲು ಇಂದಿರಾ ಗಾಂಧಿಯವರ ಹೆಸರನ್ನಿಟ್ಟಿದ್ದು ನೋವನ್ನುಂಟು ಮಾಡಿದೆ ಎಂದ ಚೌಹಾಣ್, ಕಾಂಗ್ರೆಸ್ ಒಂದು ಕುಟುಂಬವನ್ನು ಮಾತ್ರ ವೈಭವೀಕರಿಸಿತ್ತು ಮತ್ತು ಇತರ ಹುತಾತ್ಮರನ್ನು ಮರೆತಿತ್ತು. ಈ ಐತಿಹಾಸಿಕ ತಪ್ಪನ್ನು ಬಿಜೆಪಿ ಸರಿಪಡಿಸಲಿದೆ ಎಂದರು.

ಈ ಸಂದರ್ಭದಲ್ಲಿ ತಾಂತ್ಯಾ ಭಿಲ್ ವಂಶಜರನ್ನು ಸನ್ಮಾನಿಸಿದ ಚೌಹಾಣ್,ಭಿಲ್ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು.

ಗೌರವ ಕಳಶ ಯಾತ್ರಾ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಬಳಿಕ ತಾಂತ್ಯಾ ಮಾಮಾ ಹುತಾತ್ಮರಾದ ಡಿ.4ರಂದು ಪಾತಾಲಪಾನಿಯಲ್ಲಿ ಅಂತ್ಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News