ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸಲು ಕಾನೂನು ತರಬೇಕು: ರಾಕೇಶ್ ಟಿಕಾಯತ್

Update: 2021-11-28 15:16 GMT

ಮುಂಬೈ, ನ.28: ದೇಶದ ರೈತರ ಹಿತಾಸಕ್ತಿಗಳ ರಕ್ಷಣೆಗಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಖಾತರಿ ಪಡಿಸಲು ಕೇಂದ್ರವು ಕಾನೂನನ್ನು ತರಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ರವಿವಾರ ಇಲ್ಲಿ ಆಗ್ರಹಿಸಿದರು.

ಸಂಯುಕ್ತ ಶೇತ್ಕರಿ ಕಾಮಗಾರ್ ಮೋರ್ಚಾದ ಆಶ್ರಯದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಿಸಾನ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದ ಟಿಕಾಯತ್, ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಂಎಸ್‌ಪಿಯ ಬೆಂಬಲಿಗರಾಗಿದ್ದರು ಮತ್ತು ರೈತರ ಹಿತಾಸಕ್ತಿಗಳ ಖಾತರಿಗಾಗಿ ದೇಶವ್ಯಾಪಿ ಕಾನೂನು ತರಬೇಕೆಂದು ಬಯಸಿದ್ದರು. ಆದರೆ ಈಗ ಇದೇ ಮೋದಿ ನೇತೃತ್ವದ ಕೇಂದ್ರ ಸರಕಾರವು ಎಂಎಸ್‌ಪಿ ಕುರಿತು ಚರ್ಚೆಯಿಂದ ದೂರ ಓಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರವು ರೈತರಿಗೆ ಎಂಎಸ್‌ಪಿಯ ಖಾತರಿ ನೀಡಲು ಕಾನೂನನ್ನು ತರಬೇಕು. ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಸರಕಾರವು ಗಮನ ಹರಿಸಬೇಕಾದ ಹಲವಾರು ಸಮಸ್ಯೆಗಳಿವೆ ಮತ್ತು ಇವುಗಳನ್ನು ಪ್ರಮುಖವಾಗಿ ಬಿಂಬಿಸಲು ನಾವು ದೇಶಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ ಟಿಕಾಯತ್,ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಸುದೀರ್ಘ ಪ್ರತಿಭಟನೆ ಸಂದರ್ಭದಲ್ಲಿ ಮೃತ ರೈತರ ಕುಟುಂಬಗಳಿಗೆ ಆರ್ಥಿಕ ನೆರವನ್ನು ಒದಗಿಸಬೇಕು ಎಂದೂ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News