ನಗುವನ್ನೇ ಅಪರಾಧವಾಗಿಸಿ, ಶಿಕ್ಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ: ಕುನಾಲ್ ಕಾಮ್ರ

Update: 2021-11-28 16:04 GMT

ಹೊಸದಿಲ್ಲಿ: ವರ್ಷಗಳು ಕಳೆದಂತೆಲ್ಲ ಕಾಮಿಡಿ ಕಲಾವಿದರಿಗೆ ನಗು ದುಬಾರಿಯಾಗುತ್ತಿದೆ ಎಂದು ಖ್ಯಾತ ಕಾಮಿಡಿಯನ್ ಕುನಾಲ್ ಕಾಮ್ರ ಹೇಳಿದ್ದಾರೆ.

ಪೊಲೀಸರು ನೋಟಿಸ್ ನೀಡಿದ ಬಳಿಕ ಮುನವ್ವರ್ ಫಾರೂಕಿಯವರ ಬೆಂಗಳೂರು ಕಾರ್ಯಕ್ರಮವನ್ನು ಸಂಘಟಕರು ರದ್ದುಪಡಿಸಿದ ಹಿನ್ನೆಲೆಯಲ್ಲಿ ಕಾಮ್ರ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.

ಫಾರೂಕಿ ಕಾರ್ಯಕ್ರಮಕ್ಕೆ ನಗರದ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾದ್ದನ್ನು ಮತ್ತು ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಕ್ರಮ ನಿಷೇಧಿಸಿರುವುದನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಫೇಸ್‍ಬುಕ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಕಾಮ್ರ, ವರ್ಷಗಳು ಕಳೆದಂತೆ ಕಾಮಿಡಿಯನ್ ಗಳಿಗೆ ನಗು ದುಬಾರಿಯಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

"ಪ್ರತಿಯೊಬ್ಬ ಕಲಾವಿದರೂ ಲೆಕ್ಕಾಚಾರದವರಾಗಿರಬೇಕು ಎಂಬ ಪರಿಸ್ಥಿತಿ ಇದೆ. ಈ ನಡೆಯೇ ಕಲಾಪ್ರಕಾರದ ನಿಧಾನ ಸಾವಿಗೆ ಕಾರಣವಾಗುವಂಥದ್ದು. ನಗು ಸುಂದರ, ಪ್ರಾಮಾಣಿಕ ಹಾಗೂ ಸ್ವಾಭಾವಿಕವಾಗಿ ಹೊರಹೊಮ್ಮುವಂಥದ್ದು. ಬದಲಾಗಿ ಒಬ್ಬ ಕಾಮಿಡಿಯನ್ ತನ್ನ ಪ್ರೇಕ್ಷಕರನ್ನು ನಗಿಸಬೇಕಾದರೆ ಪ್ರೇಕ್ಷಕರಿಗೆ ಏನು ಪ್ರಸ್ತುತಪಡಿಸಬೇಕು ಎಂದು ಲೆಕ್ಕಾಚಾರ ಹಾಕಿಕೊಂಡರೆ, ಪ್ರೇಕ್ಷಕರು ಕೂಡಾ ಏಕೆ ನಗಬೇಕು ಎಂಬ ಯೋಚನೆ ಮಾಡುತ್ತಾರೆ" ಎಂದು ವಿಶ್ಲೇಷಿಸಿದ್ದಾರೆ.

"ನೀವು ನಗುತ್ತಿರುವಾಗ ಹಿಂದೆಂದೂ ಮಾಡಿರಲಾರಿರಿ ಅಥವಾ ಮುಂದೆ ಮಾಡಲಾರಿರಿ" ಎಂಬ ಝೆನ್ ಮಾಸ್ಟರ್ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, "ಆ ಅದಮ್ಯ,  ಬೆರಗುಗೊಳಿಸುವಂಥ, ಶಾಶ್ವತ ಸುಂದರ ನಗುವನ್ನು ಶಿಕ್ಷಿಸಲಾಗುತ್ತಿದೆ ಮತ್ತು ಅಪರಾಧವಾಗಿ ಪರಿಗಣಿಸಲಾಗುತ್ತಿದೆ" ಎಂದು ವಿವರಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News