ಸಂಸತ್ತಿನಲ್ಲಿ ಎಲ್ಲ ವಿಷಯ ಚರ್ಚಿಸಲು ಸರಕಾರ ಸಿದ್ಧ: ಪ್ರಧಾನಿ ಮೋದಿ

Update: 2021-11-29 05:19 GMT

ಹೊಸದಿಲ್ಲಿ: ಸಂಸತ್ತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು, ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು  ಸರಕಾರ ಸಿದ್ಧವಾಗಿದೆ. ಆದರೆ ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಚಳಿಗಾಲದ  ಅಧಿವೇಶನ ಆರಂಭಕ್ಕೆ ಮೊದಲು  ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

"ಸರಕಾರವು ಪ್ರತಿ ಪ್ರಶ್ನೆಗೆ ಉತ್ತರಿಸಲು ಸಿದ್ಧವಾಗಿದೆ. ನಮಗೆ ಸಂಸತ್ತಿನಲ್ಲಿ ಪ್ರಶ್ನೆಗಳು ಬೇಕು ಹಾಗೂ ಶಾಂತಿ ಬೇಕು. ಸರಕಾರ ಅಥವಾ ಸರಕಾರದ ನೀತಿಗಳ ವಿರುದ್ಧ ಯಾವುದೇ ಧ್ವನಿ ಎತ್ತಿದರೂ  ಸಂಸತ್ತಿನ ಘನತೆ ಹಾಗೂ ಸ್ಪೀಕರ್ ಪೀಠವನ್ನು ಎತ್ತಿಹಿಡಿಯಬೇಕು. ನಾವು ಅಂತಹ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು. ಅದು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ”ಎಂದು ಪ್ರಧಾನಿ ಮೋದಿ ಹೇಳಿದರು.

ಹೊಸ ಕೋವಿಡ್ ರೂಪಾಂತರ ‘ಓಮಿಕ್ರಾನ್' ಬಗ್ಗೆ ಎಚ್ಚರಿಕೆ ನೀಡಿದ ಪ್ರಧಾನಿಯವರು "ಈ ಬಿಕ್ಕಟ್ಟಿನ ಸಮಯದಲ್ಲಿ ಪ್ರತಿಯೊಬ್ಬರ ಆರೋಗ್ಯವು ಆದ್ಯತೆಯಾಗಿರುವುದರಿಂದ" ಎಲ್ಲಾ ಸಂಸದರು ಮತ್ತು ಇತರರು ಜಾಗರೂಕರಾಗಿರಬೇಕು ಎಂದರು.

ಸೋಮವಾರ ಆರಂಭವಾಗಲಿರುವ ಸಂಸತ್ತಿನ 25 ದಿನಗಳ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ  ಸೇರಿದಂತೆ 36 ಮಸೂದೆಗಳನ್ನು ಅಂಗೀಕರಿಸುವ ನಿರೀಕ್ಷೆಯಿದೆ.

ಪೆಗಾಸಸ್ ಪ್ರಕರಣ ಹಾಗೂ ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳನ್ನು ಎತ್ತಿಕೊಂಡು ಪ್ರತಿಪಕ್ಷಗಳು ಸರಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News