ರೈತ ಹೋರಾಟಕ್ಕೆ ಸಂದ ಗೆಲುವು: ಕೃಷಿ ಕಾಯ್ದೆ ವಾಪಸ್ ವಿಧೇಯಕಕ್ಕೆ ಸಂಸತ್ ಅಂಗೀಕಾರ

Update: 2021-11-29 17:32 GMT

ಹೊಸದಿಲ್ಲಿ,ನ.29: ವಿವಾದಾತ್ಮ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಗೆಲುವು ದೊರೆತಿದೆ. ಸಂಸತ್‌ನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಉಭಯ ಸದನಗಳು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ವಿಧೇಯಕವನ್ನು ಅಂಗೀಕರಿಸಿವೆ.

ಲೋಕಸಭೆ ಕಲಾಪ ಇಂದು ಬೆಳಗ್ಗೆ ಆರಂಭಗೊಂಡ ಕೆಲವೇ ನಿಮಿಷಗಳ ಬಳಿಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ 2021ರ ಕೃಷಿ ಕಾಯ್ದೆ ಹಿಂದೆಗೆತ ವಿಧೇಯಕವನ್ನು ಮಂಡಿಸಿದರು. ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್‌ರಂಜನ್ ಚೌಧರಿ ಅವರು ವಿಧೇಯಕದ ಬಗ್ಗೆ ಚರ್ಚೆಯಾಗಬೇಕೆಂದು ಆಗ್ರಹಿಸಿದರು. ಆದರೆ ಸ್ಪೀಕರ್ ಓಂ ಬಿರ್ಲಾ ಅವರು ಚರ್ಚೆಗೆ ಅನುಮತಿಯನ್ನು ನಿರಾಕರಿಸಿದ್ದರು.ಆನಂತರ ಸದನವು ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಿತು.

ಆನಂತರ ಮಧಾಹ್ನ ರಾಜ್ಯಸಭೆಯು ಸೇರುತ್ತಿದ್ದಂತೆಯೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸದನದಲ್ಲಿ ಕೃಷಿ ಕಾನೂನು ಹಿಂತೆಗೆತ ವಿಧೇಯಕವನ್ನು ಮಂಡಿಸಿದರು. ವಿಧೇಯಕವನ್ನು ಅಂಗೀಕರಿಸುವ ಮೊದಲು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅವರು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಎರಡು ನಿಮಿಷಗಳ ಕಾಲಾವಕಾಶ ನೀಡಿದರು.

ಸದನದಲ್ಲಿ ಮಾತನಾಡಿದ ಖರ್ಗೆ ಇತ್ತೀಚೆಗೆ ನಡೆದ ಐದು ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶವನ್ನು ಪರಾಮರ್ಶಿಸಿದ ಕೇಂದ್ರ ಸರಕಾರವು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ ಎಂದರು.

ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ 700ಕ್ಕೂ ಅಧಿಕ ಮಂದಿ ರೈತರು ಸಾವನ್ನಪ್ಪಿರುವುದನ್ನು ಖರ್ಗೆ ತನ್ನ ಭಾಷಣದಲ್ಲಿ ಪ್ರಸ್ತಾವಿಸಿದರು. ಖರ್ಗೆ ಅವರು ತನಗೆ ಭಾಷಣ ಮಾಡಲು ನೀಡಲಾದ ನಿಗದಿತ ಕಾಲಾವಕಾಶದ ಮಿತಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದರಿಂದ ಉಪಸಭಾಧ್ಯಕ್ಷರು ವಿಧೇಯಕವನ್ನು ಮಂಡಿಸುವಂತೆ ಕೇಂದ್ರ ಕೃಷಿ ಸಚಿವ ತೋಮರ್ ಅವರಿಗೆ ಸೂಚಿಸಿದರು.

ಕೃಷಿ ಕಾಯ್ದೆ ಹಿಂತೆಗೆತ ವಿಧೇಯಕವನ್ನು ಸದನದಲ್ಲಿ ಮಂಡಿಸಿ ಮಾತನಾಡಿದ ಅವರು ರೈತರ ಪ್ರಯೋಜನಕ್ಕಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದರು.ಆದಾಗ್ಯೂ ಈ ಕಾನೂನುಗಳಿಂದಾಗುವ ಪ್ರಯೋಜನಗಳ ಬಗ್ಗೆ ಪ್ರತಿಭಟನಾ ನಿರತ ರೈತರ ಮನದಟ್ಟು ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲವೆಂದು ಅವರು ವಿಷಾದಿಸಿದರು.

ಕೃಷಿ ವಲಯದಲ್ಲಿ ಆಗಬೇಕಾದ ಸುಧಾರಣೆಗಳ ಅವಶ್ಯಕತೆಗಳ ಬಗ್ಗೆ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತಾದರೂ, ಅದೇ ಪಕ್ಷವು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸುವ ಮೂಲಕ ಇಬ್ಬಗೆಯ ನೀತಿಯನ್ನು ಅನುಸರಿಸುತ್ತದೆ ಎಂದರು.

ಗುರುನಾನಕ ಜಯಂತಿಯ ದಿನದಂದೇ ಕೃಷಿ ಕಾಯ್ದೆಗಳ ಹಿಂತೆಗೆತವನ್ನು ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ವಿಶಾಲ ಹೃದಯವನ್ನು ಪ್ರದರ್ಶಿಸಿದ್ದಾರೆ ಎಂದು ತೋಮರ್ ಹೇಳಿದರು.

ಸರಕಾರ ಹಾಗೂ ಪ್ರತಿಪಕ್ಷಗಳು ಇವೆರಡೂ ಕೂಡಾ ಕೃಷಿ ಕಾಯ್ದೆಗಳ ಹಿಂತೆಗೆತದ ಪರವಾಗಿರುವುದರಿಂದ ಕೃಷಿ ಕಾಯ್ದೆ ವಾಪಸ್

ವಿಧೇಯಕದ ಕುರಿತ ಯಾವುದೇ ಚರ್ಚೆಯ ಅಗತ್ಯವಿರುವುದಿಲ್ಲ ಎಂದು ತೋಮರ್ ಅಭಿಪ್ರಾಯಿಸಿದರು. ಆದರೆ ಟಿಎಂಸಿ ಸಂಸದರಾದ ಡೋಲಾ ಸೇನ್ ಹಾಗೂ ನದಿಮುಲ್ ಹಕ್ ಅವರು ಚರ್ಚೆಯನ್ನು ನಡೆಸದೆಯೇ ವಿಧೇಯಕವನ್ನು ಅಂಗೀಕರಿಸುವುದನ್ನು ವಿರೋಧಿಸಿದರು.

ಟಿಎಂಸಿ ಹಾಗೂ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ನಡುವೆಯೇ 2021ರ ಕೃಷಿ ಕಾಯ್ದೆ ಹಿಂತೆಗೆತ ವಿಧೇಯಕವನನ್ನು ಧ್ವನಿಮತದಿಂದ ರಾಜ್ಯಸಭೆ ಅಂಗೀಕರಿಸಿತು. ಆನಂತರ ಸದಸನವನ್ನು ಅರ್ಧ ತಾಸುವರೆಗೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News