'ಒಮಿಕ್ರಾನ್': ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರಕಾರ

Update: 2021-11-29 17:36 GMT

ಹೊಸದಿಲ್ಲಿ,ನ.29: ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಒಮಿಕ್ರಾನ್ ವೈರಸ್ ವಿರುದ್ಧ ಕಟ್ಟೆಚ್ಚರ ವಹಿಸಿರುವ ಭಾರತವು ವೈರಸ್‌ನಿಂದ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರು ದೇಶದ ವಿಮಾನನಿಲ್ದಾಣಗಳಲ್ಲಿ ಬಂದಿಳಿದ ಬಳಿಕ ಸೋಂಕಿನ ತಪಾಸಣೆಗೊಳಗಾಗುವುದನ್ನು ಕಡ್ಡಾಯಗೊಳಿಸಲಾಗಿದೆ.

ವಿದೇಶದಿಂದ ಆಗಮಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ಆರಂಭಕ್ಕೆ 72 ತಾಸು ಮುಂಚಿತವಾಗಿ ಕೋವಿಡ್19 ಪರೀಕ್ಷೆಗೊಳಗಾಗಬೇಕಾದ ನಿಯಮ ಕೂಡಾ ಎಂದಿನಂತೆ ಮುಂದುವಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ವಿದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಕೋವಿಡ್19 ಪರೀಕ್ಷೆಗೊಳಪಡಿಸುವ ನಿಯಮಾವಳಿಗಳನ್ನು ವಿನೂತನಗೊಳಿಸಿದೆ. ಪರಿಷ್ಕೃತ ನಿಯಮಾವಳಿಗಳ ಪ್ರಕಾರ, ವಿಮಾನ ನಿಲ್ದಾಣದಲ್ಲಿ ತಪಾಸಣೆಯ ವೇಳೆ ಕೋವಿಡ್19 ಸೋಂಕು ದೃಢಪಟ್ಟ ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಲಾಗುವುದು ಹಾಗೂ ಅವರನ್ನು ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆಗೊಳಪಡಿಸಲಾಗುವುದು ಮತ್ತು ಅವರ ಪರೀಕ್ಷಾ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್‌ಗಾಗಿ ಬಳಸಿಕೊಳ್ಳಲಾಗುವುದು.

ಕೋವಿಡ್19 ಸೋಂಕಿನ ತಪಾಸಣೆಯಲ್ಲಿ ನೆಗೆಟಿವ್ ಬಂದ ಪ್ರಯಾಣಿಕಕರನ್ನು ವಿಮಾನನಿಲ್ದಾಣದಿಂದ ನಿರ್ಗಮಿಸಲು ಅವಕಾಶ ನೀಡಲಾಗುವುದು ಹಾಗೂ ಅವರು 7 ದಿನಗಳ ಕಾಲ ಮನೆಯಲ್ಲಿ ಐಸೋಲೇಶನ್‌ನಲ್ಲಿರಬೇಕಾಗುತ್ತದೆ. ಭಾರತಕ್ಕೆ ಆಗಮಿಸಿದ 8ನೇ ದಿನದ ಬಳಿಕ ಅವರನ್ನು ಮರಳಿ ತಪಾಸಣೆಗೆ ಒಳಪಡಿಸಲಾಗುವುದು ಮತ್ತು ಆನಂತರದ 7 ದಿನಗಳಲ್ಲಿ ಅವರು ಸ್ವಯಂ ನಿಗಾವಣೆಯಲ್ಲಿರಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ.

ಕೇಂದ್ರ ಸರಕಾರವು ನವೆಂಬರ್ 28ರಂದು ಮಾರ್ಗದರ್ಶಿ ಸೂಚಿಗಳನ್ನು ಪರಿಷ್ಕರಿಸಿತ್ತು. ಈ ನೂತನ ಮಾರ್ಗದರ್ಶಿ ಸೂತ್ರಗಳನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ . ಒಮಿಕ್ರಾನ್ ಪ್ರಭೇದದ ವೈರಸ್ ಪತ್ತೆಯಾಗಿರುವ ದೇಶಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ, ಸೋಂಕಿನ ಅಪಾಯದ ಶ್ರೇಣಿಯಲ್ಲಿ ಇಲ್ಲದ ದೇಶಗಳಿಂದ ಆಗಮಿಸುವ ಶೇ.5ರಷ್ಟು ಪ್ರಯಾಣಿಕರನ್ನು ಕೂಡಾ ಯಾದೃಚ್ಛಿಕ(ರ್ಯಾಂಡಮ್)ವಾಗಿ ಪರೀಕ್ಷೆ ಮಾಡುವುದನ್ನು ಕೂಡಾ ನೂತನ ಮಾರ್ಗಸೂಚಿಯಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ವಿಮಾನನಿಲ್ದಾಣದಲ್ಲಿ ಅಥವಾ ಹೋಂ ಐಸೋಲೇಶನ್‌ನಲ್ಲಿ ಅಥವಾ ರ್ಯಾಂಡಮ್ ಸ್ಯಾಂಪ್ಲಿಂಗ್‌ನಲ್ಲಿ ಕೋವಿಡ್19 ಪಾಸಿಟಿವ್ ಬಂದಿರುವ ಎಲ್ಲಾ ವ್ಯಕ್ತಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್‌ಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು.

ಬಿ.1.1.1.529 ಪ್ರಭೇದದ ಒಮಿಕಾನ್ ವೈರಸ್ ಪ್ರಪ್ರಥಮವಾಗಿ ದಕ್ಷಿಣ ಆಫ್ರಿಕದಲ್ಲಿ ನವೆಂಬರ್ 24ರಂದು ವರದಿಯಾಗಿತ್ತು. ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾವಿರಿಸುವಂತೆ ರಾಜ್ಯ ಸರಕಾರಗಳಿಗೂ ಕೇಂದ್ರ ಸರಕಾರ ಸೂಚಿಸಿದೆ. ಸಾರ್ವಜನಿಕರ ಸೋಂಕು ತಪಾಸಣಾ ಪರೀಕ್ಷೆಗಳನ್ನು ಅಧಿಕಗೊಳಿಸುವುದು, ಕೋವಿಡ್19 ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿರುವ ಸ್ಥಳಗಳ ಮೇಲೆ ನಿಗಾವಿಡಲಾಗುವುದು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News