ಮಹಿಳಾ ಸಂಸದರೊಂದಿಗಿನ ಸೆಲ್ಫಿಪೋಸ್ಟ್ ಮಾಡಿದ್ದ ಶಶಿ ತರೂರ್ ಟ್ರೋಲ್: ಸಂಸದೆ ಮಿಮಿ ಚಕ್ರವರ್ತಿ ಪ್ರತಿಕ್ರಿಯೆ

Update: 2021-11-29 18:15 GMT
Photo: twitter/@ShashiTharoor

ಹೊಸದಿಲ್ಲಿ: ಸೋಮವಾರ ಮಹಿಳಾ ಸಂಸದರೊಂದಿಗೆ ಸೆಲ್ಫಿ ಪೋಸ್ಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದ್ದಾರೆ. ಈ ಟ್ರೋಲ್ ಗೆ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ.

ಇಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ “ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಾಗಿದೆ’’ ಎಂದು ಚಿತ್ರದ ಶೀರ್ಷಿಕೆಯೊಂದಿಗೆ ಶಶಿ ತರೂರ್   ಹಂಚಿಕೊಂಡ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಅಥವಾ ರಾಜಕಾರಣಿಗಳನ್ನು ಆಕರ್ಷಿಸಿಲ್ಲ.

ತರೂರ್ ಅವರನ್ನು ಹಲವು ರಾಜಕಾರಣಿಗಳು ತರಾಟೆಗೆ ತೆಗೆದುಕೊಂಡರು. ಲೋಕಸಭೆಯಲ್ಲಿ ಮಹಿಳೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕಾಗಿ ಶಾಸಕ ರಾಜೇಶ್ ನಗರ್ ಟ್ವಿಟರ್‌ನಲ್ಲಿ ಶಶಿ ತರೂರ್ ಅವರನ್ನು ಖಂಡಿಸಿದ್ದಾರೆ.

 “ಮಿಸ್ಟರ್ ತರೂರ್, ಲೋಕಸಭೆಯು ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹಾಗೂ  ಅವರನ್ನು "ಆಕರ್ಷಕ" ಎಂದು ಕರೆಯುವುದಕ್ಕಾಗಿ ಅಲ್ಲ. ಭವಿಷ್ಯದ ಸಂಸದರಿಗೆ ತಪ್ಪು ನಿದರ್ಶನ ನೀಡುತ್ತಿದ್ದೀರಿ’’ ಎಂದು ರಾಜೇಶ್ ನಗರ್ ಟ್ವೀಟ್ ಮಾಡಿದ್ದಾರೆ.

ರಾಜೇಶ್ ನಗರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಿಮಿ ಚಕ್ರವರ್ತಿ ಅವರು ನಿಜವಾಗಿಯೂ ಸೆಲ್ಫಿ ತೆಗೆದುಕೊಂಡಿಲ್ಲ. ನಾನು ಸೆಲ್ಫಿ ತೆಗೆದಿದ್ದೆ ಎಂದು ಬರೆದಿದ್ದಾರೆ.

ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ಶಶಿ ತರೂರ್ ಅವರು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಪಟಿಯಾಲ ಸಂಸದೆ ಪ್ರನೀತ್ ಕೌರ್, ದಕ್ಷಿಣ ಚೆನ್ನೈ ಸಂಸದೆ ತಮಿಝಾಚಿ ತಂಗಪಾಂಡಿಯನ್, ಜಾದವ್‌ಪುರ ಸಂಸದೆ ಮಿಮಿ ಚಕ್ರವರ್ತಿ, ಬಸಿರ್‌ಹತ್ ಸಂಸದೆ ನುಶ್ರತ್ ಜಹಾನ್, ಕರೂರ್ ಸಂಸದೆ ಎಸ್. ಜೋತಿಮಣಿ ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News