×
Ad

ಬಿಜೆಪಿಯ ಕೊಳೆಗೇರಿ ನಿವಾಸಿಗಳ ಕಾರ್ಯಕ್ರಮದ ಪೋಸ್ಟರ್ ಗಳಲ್ಲಿ ತಮಿಳು ಲೇಖಕ ಪೆರುಮಾಳ್ ಮುರುಗನ್ ಚಿತ್ರ!

Update: 2021-11-30 14:49 IST
Photo: Twitter/@BJP4Delhi

ಹೊಸದಿಲ್ಲಿ : ಕೊಳೆಗೇರಿ ನಿವಾಸಿಗಳನ್ನು ಗುರಿಯಾಗಿಸಿ ದಿಲ್ಲಿ ಬಿಜೆಪಿ ಘಟಕದ 'ಝುಗ್ಗಿ ಸಮ್ಮಾನ್ ಯಾತ್ರಾ' ಕಾರ್ಯಕ್ರಮದ ಪೋಸ್ಟರುಗಳಲ್ಲಿ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ಫೋಟೋವನ್ನು ಪಕ್ಷ ಬಳಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೋಸ್ಟರಿನಲ್ಲಿ ಕೊಳೆಗೇರಿ ನಿವಾಸಿಗಳು ಎಂದು ಬಿಂಬಿಸಲಾದ ಕೆಲ ಜನರ ಚಿತ್ರಗಳೊಂದಿಗೆ ಪೆರುಮಾಳ್ ಅವರ ಚಿತ್ರವೂ ಇದೆ. ದಿಲ್ಲಿ ಬಿಜೆಪಿಯು ಸೋಮವಾರ ಪಟೇಲ್ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಈ ಪೋಸ್ಟರ್‌ಗಳು ಕಾಣಿಸಿವೆ ಎಂದು scroll.in ವರದಿ ಮಾಡಿದೆ.

ಪೋಸ್ಟರ್‌ಗಳಲ್ಲಿ ಪೆರುಮಾಳ್ ಅವರ ಚಿತ್ರವೇಕೆ ಎಂದು ಹಲವು ಸಾಮಾಜಿಕ ಜಾಲತಾಣಿಗರು ಪ್ರಶ್ನಿಸಿದ ನಂತರ ಪ್ರತಿಕ್ರಿಯಿಸಿರುವ ದಿಲ್ಲಿ ಬಿಜೆಪಿ ಉಪಾಧ್ಯಕ್ಷ ರಾಜನ್ ತಿವಾರಿ, ಪಕ್ಷದ ಡಿಸೈನ್ ತಂಡವನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಸಾಮಾನ್ಯವಾಗಿ ಇಂತಹ ಡಿಸೈನ್ ಕೆಲಸವನ್ನು ಹೊರಗುತ್ತಿಗೆ ನೀಡಲಾಗುತ್ತದೆ ಆದರೆ ಪಕ್ಷದ ಹಿರಿಯ ನಾಯಕರ ಒಪ್ಪಿಗೆಯ ನಂತರವಷ್ಟೇ ಬಳಸಲಾಗುತ್ತದೆ. ಪೋಸ್ಟರ್‌ನಲ್ಲಿ ಬಳಸಲಾದ ಮುರುಗನ್ ಅವರ ಚಿತ್ರವನ್ನು ನ್ಯೂಯಾರ್ಕ್ ಟೈಮ್ಸ್ 2018ರಲ್ಲಿ ಪ್ರಕಟಿಸಿದ ಲೇಖನವೊಂದರಿಂದ ಎತ್ತಲಾಗಿದೆ ಎಂದು 'ಆಲ್ಟ್ ನ್ಯೂಸ್' ಕಂಡುಕೊಂಡಿದೆ.

ತಮ್ಮ ಚಿತ್ರವನ್ನು ಬಿಜೆಪಿಯ ಪೋಸ್ಟರ್‌ನಲ್ಲಿ ಕಾಣಿಸಿರುವ ಕುರಿತು ಪ್ರತಿಕ್ರಿಯಿಸಿರುವ ಲೇಖಕ ಪೆರುಮಾಳ್ ಮುರುಗನ್ "ಗುಡಿಸಲುಗಳಲ್ಲಿರುವವರಲ್ಲಿ ಒಬ್ಬಾತ. ಖುಷಿಯಾಗಿದೆ. ನಾನು ಕೊಳೆಗೇರಿಗೆ ಸೇರಿದವನು,'' ಎಂದು ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ.

ಖ್ಯಾತ ಸಂಗೀತಕಾರ ಟಿಎಂ ಕೃಷ್ಣ ಅವರು ಮುರುಗನ್ ಫೋಟೋ ಬಳಸಿದ ಬಿಜೆಪಿಯನ್ನು ಟೀಕಿಸಿದ್ದಾರೆ. "ಈ ಜನರ ಅಜ್ಞಾನ ಆಘಾತಕಾರಿ. ನಿಮ್ಮ ಮಾಹಿತಿಗೆ- ಪೆರುಮಾಳ್ ಮುರುಗನ್ ಅವರು ಭಾರತದ ಅತ್ಯಂತ ಪ್ರಮುಖ ಬರಹಗಾರರಲ್ಲಿ ಒಬ್ಬರು,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News