ಶುಲ್ಕ ಪಾವತಿಸಲು ಸಾಧ್ಯವಾಗದ ದಲಿತ ವಿದ್ಯಾರ್ಥಿನಿಗೆ 15,000 ರೂ. ಸಹಾಯವಾಗಿ ನೀಡಿದ ನ್ಯಾಯಾಧೀಶ

Update: 2021-11-30 12:13 GMT

ಲಕ್ನೊ: ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಾಧೀಶರು ಸೋಮವಾರ ಐಐಟಿ, ಬಿಎಚ್‌ಯುನಲ್ಲಿ ಸೀಟು ಹಂಚಿಕೆಗಾಗಿ ಶುಲ್ಕವನ್ನು ಠೇವಣಿ ಇಡಲು ಸಾಧ್ಯವಾಗದ ಬಡ ದಲಿತ ವಿದ್ಯಾರ್ಥಿನಿಯೊಬ್ಬರಿಗೆ 15,000 ರೂ. ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ವಿದ್ಯಾರ್ಥಿನಿಯನ್ನು ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ (ಐದು ವರ್ಷ, ಪದವಿ ಮತ್ತು ಮಾಸ್ಟರ್ ಆಫ್ ಟೆಕ್ನಾಲಜಿ, ಡ್ಯುಯಲ್ ಡಿಗ್ರಿ ಕೋರ್ಸ್) ಸೇರಿಸಲು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ಪೀಠವು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ ಹಾಗೂ  ಐಐಟಿ, ಬಿಎಚ್‌ಯು ನಿರ್ದೇಶಿಸಿದೆ.

ಯಾವುದೇ ಸೀಟು ಖಾಲಿ ಇಲ್ಲದಿದ್ದರೆ ದಲಿತ ವಿದ್ಯಾರ್ಥಿನಿಗೆ ಸೂಪರ್‌ನ್ಯೂಮರರಿ ಸೀಟು ರಚಿಸುವಂತೆ ಪೀಠವು ಬಿಎಚ್‌ಯುಗೆ ನಿರ್ದೇಶನ ನೀಡಿದೆ. ಪ್ರವೇಶಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಮೂರು ದಿನಗಳಲ್ಲಿ ಬಿಎಚ್ ಯುಗೆ ತೆರಳಲು ಪೀಠವು ವಿದ್ಯಾರ್ಥಿನಿಗೆ ತಿಳಿಸಿದೆ.

ವಿದ್ಯಾರ್ಥಿನಿ ಸಂಸ್ಕೃತಿ ರಂಜನ್ ಅವರು ವೈಯಕ್ತಿಕವಾಗಿ ಸಲ್ಲಿಸಿದ ಅರ್ಜಿಯ ಮೇರೆಗೆ ಪೀಠವು ಮೇಲಿನ ಆದೇಶವನ್ನು ನೀಡಿದೆ. 15,000 ರೂ. ಶುಲ್ಕವನ್ನು ಠೇವಣಿ ಮಾಡಲು ಸಮಯವನ್ನು ನೀಡುವಂತೆ ಜಂಟಿ ಸೀಟು ಹಂಚಿಕೆ ಪ್ರಾಧಿಕಾರ ಮತ್ತು ಐಐಟಿ (ಬಿಎಚ್‌ಯು) ಗೆ ನಿರ್ದೇಶನ ನೀಡಬಹುದೇ ಎಂದು ಅವರು ಪೀಠವನ್ನು ಕೋರಿದ್ದರು.  ತಾನು ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ವಿದ್ಯಾರ್ಥಿನಿ ಪ್ರೌಢಶಾಲೆಯಲ್ಲಿ 95.6 ಶೇ. ಹಾಗೂ ಇಂಟರ್ ಮೀಡಿಯಟ್ ನಲ್ಲಿ  94 ಶೇ. ಅಂಕಗಳನ್ನು ಪಡೆದಿದ್ದರು. ಈಕೆ ಐಐಟಿಗಳಲ್ಲಿ ಆಯ್ಕೆಗಾಗಿ ಜೆಇಇ ಪರೀಕ್ಷೆಯಲ್ಲಿ ಹಾಜರಾಗಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಯಶಸ್ವಿಯಾಗಿದ್ದರು. ಅವರು ಜೆಇಇ ಮುಖ್ಯ ಪರೀಕ್ಷೆಯಲ್ಲಿ 92.77 ಶೇ. ಅಂಕಗಳನ್ನು ಗಳಿಸಿದರು ಹಾಗೂ ಎಸ್‌ಸಿ ವರ್ಗದ ಅಭ್ಯರ್ಥಿಯಾಗಿ 2062 ಶ್ರೇಣಿಯನ್ನು ಪಡೆದರು. ಅದರ ನಂತರ, ಅರ್ಜಿದಾರರು ಜೆಇಇ ಅಡ್ವಾನ್ಸ್ ಗೆ ಸೆಪ್ಟೆಂಬರ್ 16, 2021 ರಂದು ಅರ್ಜಿ ಸಲ್ಲಿಸಿದ್ದರು ಮತ್ತು ಅದನ್ನು ಅಕ್ಟೋಬರ್ 15, 2021 ರಂದು ಪರಿಶಿಷ್ಟ ಜಾತಿ ವರ್ಗದಲ್ಲಿ 1,469 ರ್ಯಾಂಕ್ ನೊಂದಿಗೆ  ತೇರ್ಗಡೆಯಾಗಿದ್ದರು.

“ಅರ್ಜಿದಾರರಿಗೆ ಕೌನ್ಸೆಲಿಂಗ್‌ನಲ್ಲಿ ಗಣಿತ ಮತ್ತು ಕಂಪ್ಯೂಟಿಂಗ್ (ಐದು ವರ್ಷ, ಪದವಿ ಮತ್ತು ಮಾಸ್ಟರ್ ಆಫ್ ಟೆಕ್ನಾಲಜಿ ಡ್ಯುಯಲ್ ಪದವಿ) ಐಐಟಿ (ಬಿಎಚ್‌ಯು) ವಾರಣಾಸಿಯಲ್ಲಿ ಸೀಟು ನೀಡಲಾಗಿದೆ. ಆದಾಗ್ಯೂ, ನಿಗದಿತ ದಿನಾಂಕಕ್ಕಿಂತ ಮೊದಲು ಶುಲ್ಕ ಪಾವತಿಸಲು 15,000 ರೂ.ಗಳನ್ನು ವ್ಯವಸ್ಥೆ ಮಾಡಲು ಆಕೆಗೆ ಸಾಧ್ಯವಾಗಲಿಲ್ಲ”ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಿಷಯದ ವಿಚಿತ್ರ ಸನ್ನಿವೇಶಗಳನ್ನು ಪರಿಗಣಿಸಿ ನ್ಯಾಯಾಧೀಶರು ನ್ಯಾಯಾಲಯದ ಸಮಯದ ನಂತರ ವಿದ್ಯಾರ್ಥಿನಿಗೆ  ಸ್ವಯಂ ಪ್ರೇರಿತರಾಗಿ 15,000 ರೂ.ಗಳನ್ನು ಹಸ್ತಾಂತರಿಸಿದರು ಹಾಗೂ ಮುಂದಿನ ಮೂರು ದಿನಗಳಲ್ಲಿ ಆಕೆಗೆ ಐಐಟಿ (ಬಿಎಚ್ ಯು) ನಲ್ಲಿ ಪ್ರವೇಶವನ್ನು ನೀಡಲಾಗುವುದು ಎಂದು ತಮ್ಮ ಆದೇಶದಲ್ಲಿ ಖಚಿತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News