2017ರಿಂದೀಚೆಗೆ ಪೌರತ್ವ ತ್ಯಜಿಸಿದ 6 ಲಕ್ಷಕ್ಕೂ ಅಧಿಕ ಭಾರತೀಯರು: ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ

Update: 2021-11-30 12:36 GMT
Photo: PTI

ಹೊಸದಿಲ್ಲಿ: ದೇಶದಲ್ಲಿ 2017 ಹಾಗೂ ಸೆಪ್ಟೆಂಬರ್ 2021ರ ನಡುವೆ  6 ಲಕ್ಷಕ್ಕೂ ಅಧಿಕ ಭಾರತೀಯರು ಬೇರೆ ದೇಶದ ನಾಗರಿಕತ್ವವನ್ನು ಪಡೆಯಲು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರಕಾರ ಇಂದು ಸಂಸತ್ತಿಗೆ ಮಾಹಿತಿ ನೀಡಿದೆ.

ಭಾರತದಲ್ಲಿ 2017ರಲ್ಲಿ 1.33 ಲಕ್ಷ ಮಂದಿ ತಮ್ಮ ಪೌರತ್ವ ತ್ಯಜಿಸಿದರೆ, 2018ರಲ್ಲಿ 1.34 ಲಕ್ಷ ಮಂದಿ, 2019ರಲ್ಲಿ 1.44 ಲಕ್ಷ ಮಂದಿ, 2020ರಲ್ಲಿ 85,248 ಹಾಗೂ 2021ರಲ್ಲಿ ಸೆಪ್ಟೆಂಬರ್ 30ರ ತನಕ 1.11 ಲಕ್ಷ ಮಂದಿ  ತಮ್ಮ ಪೌರತ್ವ ತ್ಯಜಿಸಿದ್ದಾರೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಳಿ ಲಭ್ಯ ಮಾಹಿತಿಯಂತೆ ಒಟ್ಟು 1,33,83,718 ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

2016 ಹಾಗೂ 2020ರ ನಡುವೆ 4,177 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದ್ದರೆ ಈ ಅವಧಿಯಲ್ಲಿ ಒಟ್ಟು 10,645 ಮಂದಿ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ ಗರಿಷ್ಠ (7,782) ಮಂದಿ ಪಾಕಿಸ್ತಾನದವರಾಗಿದ್ದರೆ ಉಳಿದಂತೆ ಅಫ್ಗಾನಿಸ್ತಾನದ 795 ಮಂದಿ ಅಮೆರಿಕಾದ 227 ಮಂದಿ, ಶ್ರೀಲಂಕಾದ 205, ಬಾಂಗ್ಲಾದೇಶದ 184, ನೇಪಾಳದ 167 ಹಾಗೂ ಕೆನ್ಯಾದ  185 ಮಂದಿ ಸೇರಿದ್ದಾರೆ.

2016ರಲ್ಲಿ ಭಾರತೀಯ ಪೌರತ್ವಕ್ಕೆ ಒಟ್ಟು 2,262 ಮಂದಿ ಅರ್ಜಿ ಸಲ್ಲಿಸಿದ್ದರೆ 2017ರಲ್ಲಿ 855 ಮಂದಿ,  2018ರಲ್ಲಿ 1,758ಮಂದಿ, 2019ರಲ್ಲಿ 4,224 ಹಾಗೂ 2020ರಲ್ಲಿ 1,546 ಮಂದಿ ಅರ್ಜಿ ಸಲ್ಲಿಸಿದ್ದರು.

ಪೌರತ್ವ ತಿದ್ದುಪಡಿ ಕಾಯಿದೆಯ ಅಧಿಸೂಚನೆ ಹೊರಡಿಸಿದ ನಂತರ ಈ ಕಾಯಿದೆಯಡಿ ಪೌರತ್ವಕ್ಕೆ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ ಸಚಿವರು ರಾಷ್ಟ್ರ ಮಟ್ಟದಲ್ಲಿ ಎನ್‍ಆರ್‍ಸಿ ಜಾರಿಗೊಳಿಸುವ ಕುರಿತು ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News