"ಕ್ಷಮೆ ಕೇಳಲು ನಾವು ಸಾವರ್ಕರ್ ಅಲ್ಲ": ಅಮಾನತುಗೊಂಡ ರಾಜ್ಯಸಭಾ ಸದಸ್ಯರ ಪ್ರತಿಕ್ರಿಯೆ

Update: 2021-11-30 14:22 GMT

ಹೊಸದಿಲ್ಲಿ: ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ರಾಜ್ಯಸಭೆಯಿಂದ 12 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿರುವುದನ್ನು ಪ್ರತಿಭಟಿಸಿ ಸಂಸತ್ತಿನಿಂದ ಹೊರ ನಡೆದವು ಹಾಗೂ ಸಭಾಪತಿ ಅವರು ಕ್ಷಮೆಯಾಚಿಸಲು ಹೇಳಿದ ನಂತರ ಮೇಲ್ಮನೆಯಲ್ಲಿ ದಿನದ ಕಲಾಪವನ್ನು ಬಹಿಷ್ಕರಿಸಿದರು.

ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಎಂಟು ವಿರೋಧ ಪಕ್ಷದ ನಾಯಕರು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮುಂಗಾರು ಅಧಿವೇಶನದ ವೇಳೆ ಉಂಟಾದ ಗದ್ದಲದ ಕಾರಣಕ್ಕೆ ಸದಸ್ಯರನ್ನು ಅಮಾನತು ಮಾಡಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಸದನದ ಸರಿಯಾದ ಕಾರ್ಯನಿರ್ವಹಣೆಯಿಲ್ಲದೆ ಮತ್ತು ಅವರ ದುಷ್ಕೃತ್ಯಕ್ಕೆ ಪ್ರಾಮಾಣಿಕ ವಿಷಾದವಿಲ್ಲದೆ ಅಮಾನತು ರದ್ದುಗೊಳಿಸುವುದು ಸಾಧ್ಯವಿಲ್ಲ ಎಂದು ನಾಯ್ಡು ಹೇಳಿದರು ಎಂದು  ಪಿಟಿಐಗೆ ಮೂಲಗಳು ತಿಳಿಸಿವೆ.

ಅಮಾನತುಗೊಂಡ ಸದಸ್ಯರಲ್ಲಿ ಒಬ್ಬರಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ(ಸಿಪಿಐ) ಬಿನೋಯ್ ವಿಶ್ವಂ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಕ್ಷಮೆಯಾಚಿಸುವ ಯಾವುದೇ ಯೋಜನೆ ಇಲ್ಲ. ಯಾವ ಕ್ಷಮೆಯಾಚನೆ? ಕ್ಷಮೆ ಕೇಳಲು ನಾವು ಸಾವರ್ಕರ್ ಅಲ್ಲ. ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ" ಎಂದರು.

"ಇದು ಸಂಸದೀಯ ಕಾರ್ಯವಿಧಾನವನ್ನು ಹಾಗೂ  ಪ್ರತಿಪಕ್ಷಗಳನ್ನು ಕೀಳಾಗಿ ನೋಡುವ ಸರಕಾರವಾಗಿದೆ. ಇದು ವಿರೋಧ ಪಕ್ಷದ ಅಗತ್ಯವಿಲ್ಲ ಎಂದು ನಂಬುವ ಸರಕಾರವಾಗಿದೆ. ನಾವು ಅವರ ಮುಂದೆ ಬಾಗುವುದಿಲ್ಲ. ಈ ಕ್ರಮವನ್ನು ಪ್ರಶ್ನಿಸಲು ಕಾನೂನು ಮಾರ್ಗಗಳನ್ನು ನೋಡುವುದಾಗಿಯೂ'' ಅವರು ಹೇಳಿದರು.

"ಯಾವುದಕ್ಕೆ ಕ್ಷಮೆಯಾಚಿಸಬೇಕು? ಸಂಸತ್ತಿನಲ್ಲಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಕ್ಕಾಗಿಯೇ? ಇದು ಎಂದಿಗೂ ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸೋಮವಾರದಂದು ಸಂಪೂರ್ಣ ಚಳಿಗಾಲದ ಅಧಿವೇಶನಕ್ಕೆ ಅಮಾನತುಗೊಂಡಿರುವ 12 ಸಂಸದರಲ್ಲಿ ಆರು ಕಾಂಗ್ರೆಸ್, ಟಿಎಂಸಿ ಹಾಗೂ  ಶಿವಸೇನೆಯಿಂದ ತಲಾ ಇಬ್ಬರು ಮತ್ತು ಸಿಪಿಎಂ ಹಾಗೂ ಸಿಪಿಐನ ತಲಾ ಒಬ್ಬರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News