'ಒಮೈಕ್ರಾನ್': ಡಿ. 31ರ ವರೆಗೆ ಕಂಟೈನ್ಮೆಂಟ್ ಕ್ರಮಗಳನ್ನು ವಿಸ್ತರಿಸಿದ ಕೇಂದ್ರ ಸರಕಾರ

Update: 2021-11-30 14:37 GMT
ಸಾಂದರ್ಭಿಕ ಚಿತ್ರ(photo:PTI)

ಹೊಸದಿಲ್ಲಿ, ನ. 30: ಕೆಲವು ದೇಶಗಳಲ್ಲಿ ಕೊರೋನ ರೂಪಾಂತರಿತ ಪ್ರಬೇಧ ಒಮೈಕ್ರಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಂಗಳವಾರ ರಾಷ್ಟ್ರಾದ್ಯಂತ ಕೋವಿಡ್ ಕಂಟೈನ್ಮೆಂಟ್ ಕ್ರಮಗಳನ್ನು ಡಿಸೆಂಬರ್ 31ರ ವರೆಗೆ ಮುಂದುವರಿಸಿದೆ. ಅಲ್ಲದೆ, ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ವಿದೇಶಗಳಿಂದ ಆಗಮಿಸುವವರನ್ನು ಕಠಿಣ ಪರೀಕ್ಷೆಗೆ ಒಳಪಡಿಸುವಂತೆ ಶಿಫಾರಸು ಮಾಡಿ ಕೇಂದ್ರ ಆರೋಗ್ಯ ಸಚಿವಾಲಯ ನವೆಂಬರ್ 25ರಂದು ನೀಡಿದ್ದ ಸಲಹೆಗೆ ಕಟಿಬದ್ಧರಾಗಿರುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕವನ್ನು ಸಮೀಪದಿಂದ ಪತ್ತೆ ಹಚ್ಚಬೇಕು. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಬೇಕು. ಪಾಸಿಟಿವ್ ಬಂದ ಪ್ರಯಾಣಿಕರ ವರದಿಯನ್ನು ಐಎನ್‌ಎಸ್‌ಎಸಿಒಜಿ ಮಾರ್ಗಸೂಚಿ ದಾಖಲೆಯ ಪ್ರಕಾರ ನಿಯೋಜಿತ ಜಿನೋಮ್ ಸೀಕ್ವಿನ್ಸಿಂಗ್ ಪ್ರಯೋಗಶಾಲೆಗೆ ಕಳುಹಿಸಿಕೊಂಡಬೇಕು ಎಂದು ಭಲ್ಲಾ ಹೇಳಿದ್ದಾರೆ.

ಜೆನೋಮಿಕ್ ವಿಶ್ಲೇಷಣೆಯ ಫಲಿತಾಂಶವನ್ನು ತ್ವರಿತಗೊಳಿಸಲು ರಾಜ್ಯ ಕಣ್ಗಾವಲು ಅಧಿಕಾರಿ ತಮ್ಮ ನಿಯೋಜಿತ ಜಿನೋಮ್ ಸೀಕ್ವಿನ್ಸಿಂಗ್ ಪ್ರಯೋಗಾಲಯಗಳೊಂದಿಗೆ ನಿಕಟ ಸಮನ್ವಯ ಸ್ಥಾಪಿಸಬೇಕು. ಅಲ್ಲದೆ, ಕಳವಳಕಾರಿಯಾಗಿರುವ ವೈರಸ್ ಪ್ರಬೇಧ ಪತ್ತೆಯಾದರೆ ಅಗತ್ಯ ಇರುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಮಂಗಳವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಪ್ರಕರಣಗಳನ್ನು ತ್ವರಿತವಾಗಿ ಗುರುತಿಸಲು ಹಾಗೂ ನಿರ್ವಹಿಸಲು ಪರೀಕ್ಷೆಯನ್ನು ಹೆಚ್ಚಿಸುವಂತೆ ತಿಳಿಸಿದ್ದಾರೆ.

ಆರ್‌ಟಿ-ಪಿಸಿಆರ್ ಹಾಗೂ ಆರ್‌ಎಟಿ ಪರೀಕ್ಷೆಗಳಿಂದ ಈ ನೂತನ ಪ್ರಬೇಧ ತಪ್ಪಿಸಿಕೊಳ್ಳದು ಎಂದು ಅವರು ಒತ್ತಿ ಹೇಳಿದ್ದಾರೆ. ಅಲ್ಲದೆ, ಸಾಕಷ್ಟು ಮೂಲಭೂತ ಸೌಕರ್ಯಗಳ ಖಾತರಿ ನೀಡುವಂತೆ ಹಾಗೂ ಮನೆ ಐಸೋಲೇಶನ್‌ನ ಮೇಲ್ವಿಚಾರಣೆ ನಡೆಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿದ ಪ್ರದೇಶಗಳಿಗೆ ಅವರು ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News