‘ಒಮೈಕ್ರಾನ್’: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇನ್ನು ಪ್ರಯಾಣಿಕರು 6 ಗಂಟೆ ಕಾಯಬೇಕು!

Update: 2021-11-30 15:41 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ, ನ. 30: ಒಮೈಕ್ರಾನ್ ಪತ್ತೆಯಾದ ದೇಶಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿಗಾಗಿ ಕಾಯಬೇಕಾಗಿರುವುದರಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ 6 ಗಂಟೆಗಳ ಕಾಲದ ವರೆಗೆ ಸಿಲುಕಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಒಮೈಕ್ರಾನ್ ಪ್ರಬೇಧ ಪತ್ತೆಯಾದ ಅತಿ ಅಪಾಯದ 14ಕ್ಕೂ ಅಧಿಕ ದೇಶಗಳಿಂದ ಆಗಮಿಸುವ ಪ್ರಯಾಣಿಕರು ಭಾರತದ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೆ ಒಳಗಾಗುವುದು ಅತ್ಯಗತ್ಯವಾಗಿದೆ. ಕೋವಿಡ್ ಪರೀಕ್ಷೆಯ ಫಲಿತಾಂಶ ಪಡೆಯಲು ಪ್ರತಿ ಪ್ರಯಾಣಿಕರಿಗೆ 4ರಿಂದ 6 ಗಂಟೆ ಹಿಡಿಯುತ್ತದೆ. ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಿರ್ವಹಿಸುತ್ತಿರುವ ಕಂಪೆನಿ ಗಂಟೆಗೆ 400ರಿಂದ 500 ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತದೆ. ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಯುರೋಪ್‌ನಿಂದ ದಿಲ್ಲಿಗೆ ನೇರ ವಿಮಾನದಲ್ಲಿ ಆಗಮಿಸಲು ಸರಾಸರಿ 8.5 ಗಂಟೆ ಬೇಕಾಗುತ್ತದೆ. ವಿಮಾನ ಹೊರಡುವುದಕ್ಕಿಂತ ಮೊದಲ ಎರಡು ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಬರಬೇಕಾಗುತ್ತದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ 6 ಗಂಟೆಗಳು ಬೇಕಾಗುತ್ತದೆ. ಕಸ್ಟಮ್ಸ್ ಹಾಗೂ ವಲಸೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸರಕುಗಳನ್ನು ಪಡೆಯಲು ಕನಿಷ್ಠ 1 ಗಂಟೆ ಬೇಕಾಗುತ್ತದೆ. ಇದರಿಂದ ಪ್ರಯಾಣಿಕರು ದಿಲ್ಲಿ ವಿಮಾನ ನಿಲ್ದಾಣದಿಂದ ಹೊರಬರಲು ಸರಿಸುಮಾರು 17 ಗಂಟೆಗಳು ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯದ ಮೂಲಕ ಸಂಪರ್ಕ ವಿಮಾನಕ್ಕೆ ಕನಿಷ್ಠ 2.5 ಗಂಟೆ ಹೆಚ್ಚುವರಿ ಬೇಕಾಗುತ್ತದೆ. ಅಂದರೆ, 19.5 ಗಂಟೆಗಳು ಬೇಕಾಗುತ್ತದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ 6 ಗಂಟೆಗಳ ಕಾಲ ನಿಲುಗಡೆಯಾದ ಬಳಿಕ ತಲುಪುವ ಸ್ಥಳ ಅನುಸರಿಸಿ ಕನೆಕ್ಟಿಂಗ್ ವಿಮಾನಗಳಿಗೆ ಕನಿಷ್ಠ 2.5 ಗಂಟೆ ಹೆಚ್ಚುವರಿ ಸಮಯ ಬೇಕಾಗುತ್ತದೆ. ಇದರಿಂದ ಕೆಲವು ಪ್ರಯಾಣಿಕರ ಪ್ರಯಾಣಕ್ಕೆ ಸರಿಸುಮಾರು 24 ಗಂಟೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಈಗ ಯುರೋಪ್, ದಕ್ಷಿಣ ಆಫ್ರಿಕಾ, ಬ್ರೆಝಿಲ್, ಬಾಂಗ್ಲಾದೇಶ, ಬೋಟ್ಸ್ವಾನ, ಚೀನಾ, ಮಾರಿಷಶ್, ನ್ಯೂಝಿಲ್ಯಾಂಡ್, ಝಿಂಬಾಬ್ವೆ, ಸಿಂಗಾಪುರ, ಹಾಂಗ್‌ಕಾಂಗ್ ಹಾಗೂ ಇಸ್ರೇಲಿನಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇತರ ದೇಶಗಳ ಶೇ. 5 ಪ್ರಯಾಣಿಕರನ್ನು ಯಾದೃಚ್ಛಿಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ದಿಲ್ಲಿ ವಿಮಾನ ನಿಲ್ದಾಣದಿಂದ ಹೊರಬರಲು ಅಥವಾ ಕನೆಕ್ಟಿಂಗ್ ವಿಮಾನದಲ್ಲಿ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಲು ಈ ಎಲ್ಲಾ ಪ್ರಯಾಣಿಕರು ಸಿದ್ಧರಾಗಿರಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News