ಜ.18ರಂದು ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಲೇವಾರಿ: ಸುಪ್ರೀಂ ಕೋರ್ಟ್

Update: 2021-11-30 17:11 GMT

ಹೊಸದಿಲ್ಲಿ,ನ.30: ತನ್ನ ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ಬ್ಯಾಂಕುಗಳಿಂದ 9,000 ಕೋ.ರೂ.ಗೂ ಅಧಿಕ ಸಾಲ ಪಡೆದು

ಪಂಗನಾಮ ಹಾಕಿರುವ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಂದಿನ ವರ್ಷದ ಜ.18ರಂದು ಅಂತಿಮವಾಗಿ ಕೈಗೆತ್ತಿಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.

   ಸರ್ವೋಚ್ಚ ನ್ಯಾಯಾಲಯವು ಸಾಕಷ್ಟು ಸಮಯ ಮಲ್ಯರಿಗಾಗಿ ಕಾದಿದೆ ಎಂದು ಹೇಳಿದ ನ್ಯಾ.ಯು.ಯು.ಲಲಿತ್ ನೇತೃತ್ವದ ಪೀಠವು,‘ನಾವು ಇನ್ನಷ್ಟು ಸಮಯ ಕಾಯಲು ಸಿದ್ಧರಿಲ್ಲ’ಎಂದು ತಿಳಿಸಿತು. ಮಲ್ಯರನ್ನು ನ್ಯಾಯಾಂಗ ನಿಂದನೆ ದೋಷಿ ಎಂದು ನ್ಯಾಯಾಲಯವು 2017ರಲ್ಲಿಯೇ ಎತ್ತಿಹಿಡಿದಿದೆ ಎಂದು ಪೀಠವು ಬೆಟ್ಟು ಮಾಡಿತು.

 ಸೂಕ್ತ ಹೇಳಿಕೆಗಳನ್ನು ಸಲ್ಲಿಸಲು ಮಲ್ಯ ಸ್ವತಂತ್ರರಾಗಿದ್ದಾರೆ ಮತ್ತು ಯಾವುದೇ ಕಾರಣದಿಂದ ನ್ಯಾಯಾಲಯದ ಮುಂದೆ ಹಾಜರಾಗಲು ಅವರಿಗೆ ಸಾಧ್ಯವಾಗದಿದ್ದರೆ ಅವರ ಪರವಾಗಿ ವಕೀಲರು ಹೇಳಿಕೆಗಳನ್ನು ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಸ್.ಆರ್.ಭಟ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೂ ಒಳಗೊಂಡ ಪೀಠವು ತಿಳಿಸಿತು.

‘ನಾವು ಸಾಕಷ್ಟು ಸಮಯ ಕಾದಿದ್ದೇವೆ,ಇನ್ನಷ್ಟು ಕಾಯಲು ಸಾಧ್ಯವಿಲ್ಲ. ಪ್ರಕರಣವನ್ನು ವಿಲೇವಾರಿಗಾಗಿ ಜನವರಿ ಎರಡನೇ ವಾರದಲ್ಲಿ ಪಟ್ಟಿ ಮಾಡುತ್ತೇವೆ. ಒಂದಲ್ಲ ಒಂದು ಹಂತದಲ್ಲಿ ಇದು ನಡೆಯಲೇಬೇಕು ಮತ್ತು ಪ್ರಕ್ರಿಯೆಯೂ ಮುಗಿಯಬೇಕು ’ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಈ ವಿಷಯದಲ್ಲಿ ಅಮಿಕಸ್ ಕ್ಯೂರಿ ಆಗಿ ನೆರವಾಗುವಂತೆ ಹಿರಿಯ ವಕೀಲ ಜೈದೀಪ ಗುಪ್ತಾ ಅವರನ್ನು ಕೋರಿಕೊಂಡಿತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ನಾಲ್ಕು ಕೋಟಿ ಡಾಲರ್‌ಗಳನ್ನು ತನ್ನ ಮಕ್ಕಳಿಗೆ ವರ್ಗಾವಣೆ ಮಾಡಿದ್ದಕ್ಕಾಗಿ ತನ್ನನ್ನು ನ್ಯಾಯಾಂಗ ನಿಂದನೆ ದೋಷಿಯೆಂದು ಎತ್ತಿಹಿಡಿದಿದ್ದ 2017ರ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ವಜಾಗೊಳಿಸಿತ್ತು.

 ಮಲ್ಯರನ್ನು ಬ್ರಿಟನ್‌ನಿಂದ ಗಡಿಪಾರುಗೊಳಿಸಲು ತಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ,ಆದರೆ ಕೆಲವು ಕಾನೂನು ಸಮಸ್ಯೆಗಳಿಂದಾಗಿ ಅವರ ಹಸ್ತಾಂತರ ವಿಳಂಬಗೊಳ್ಳುತ್ತಿದೆ ಎಂದು ಕೇಂದ್ರ ಸರಕಾರವು ಈ ವರ್ಷದ ಜ.18ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

2016ರಿಂದ ಬ್ರಿಟನ್‌ನಲ್ಲಿ ವಾಸವಿರುವ ಮಲ್ಯ 2017, ಎ.18ರಂದು ಸ್ಕಾಟ್ಲಂಡ್ ಯಾರ್ಡ್ ತನ್ನ ವಿರುದ್ಧ ಜಾರಿಗೊಳಿಸಿದ್ದ ಗಡಿಪಾರು ವಾರಂಟ್‌ಗೆ ಸಂಬಂಧಿಸಿದಂತೆ ಜಾಮೀನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News