ಜಿಎಸ್‌ಟಿಯಿಂದ ರಾಜ್ಯಗಳಿಗೆ ಆದಾಯ ನಷ್ಟವನ್ನು ಐದು ವರ್ಷ ಸರಿದೂಗಿಸಲು ಕೇಂದ್ರ ಬದ್ಧವಾಗಿದೆ: ನಿರ್ಮಲಾ ಸೀತಾರಾಮನ್

Update: 2021-11-30 17:16 GMT
ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ನ.30: ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಕಾಯ್ದೆಯಲ್ಲಿ ಹೇಳಿರುವಂತೆ ಜಿಎಸ್‌ಟಿ ಜಾರಿಯಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟವನ್ನು ಐದು ವರ್ಷಗಳ ಕಾಲ ಸರಿದೂಗಿಸಲು ಕೇಂದ್ರವು ಬದ್ಧವಾಗಿದೆ ಮತ್ತು ಪರಿವರ್ತನೆಯ ಅವಧಿಯಲ್ಲಿ ಮೂಲವರ್ಷವಾದ 2015-16ರ ಆದಾಯಕ್ಕೆ ಶೇ.14ರಷ್ಟು ಅತಿರಿಕ್ತವಾಗಿ ರಾಜ್ಯಗಳ ಆದಾಯವು ಸಂರಕ್ಷಿತವಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

ಯೋಜಿತ ಶೇ.14ರಷ್ಟು ಆದಾಯ ಬೆಳವಣಿಗೆ ದರವನ್ನು ಯಾವುದೇ ರಾಜ್ಯವು ಸಾಧಿಸಿಲ್ಲ ಎನ್ನುವ ಅಂಶ ಸರಕಾರಕ್ಕೆ ಗೊತ್ತಿದೆಯೇ ಮತ್ತು ಹಾಗಿದ್ದಲ್ಲಿ 2022ರ ನಂತರ ಜಿಎಸ್‌ಟಿ ಪರಿಹಾರವನ್ನು ನೀಡಲು ಸರಕಾರವು ಉದ್ದೇಶಿಸಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಅಬಕಾರಿ ಸುಂಕ,ಸೇವಾ ತೆರಿಗೆ ಮತ್ತು ವ್ಯಾಟ್‌ನಂತಹ ಪರೋಕ್ಷ ತೆರಿಗೆಗಳನ್ನು ತನ್ನಲ್ಲಿ ಏಕೀಕರಿಸಿಕೊಂಡಿರುವ ಜಿಎಸ್‌ಟಿ 2017,ಜು.1ರಿಂದ ಜಾರಿಗೊಂಡಿದ್ದು,ಪರಿಹಾರಕ್ಕಾಗಿ ಐದು ವರ್ಷಗಳ ಅವಧಿಯು 2022 ಜೂನ್‌ನಲ್ಲಿ ಅಂತ್ಯಗೊಳ್ಳುತ್ತದೆ.

ಆದಾಗ್ಯೂ 2020-21 ಮತ್ತು 2021-22ನೇ ಹಣಕಾಸು ವರ್ಷಗಳಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಆದಾಯ ನಷ್ಟವನ್ನು ಸರಿದೂಗಿಸಲು ಮಾಡಿದ್ದ ಸಾಲಗಳನ್ನು ಮರುಪಾವತಿಸಲು ಐಷಾರಾಮಿ ಮತ್ತು ಪಾಪದ ಸರಕುಗಳ ಮೇಲಿನ ಪರಿಹಾರ ಸೆಸ್ ಸಂಗ್ರಹ 2026,ಮಾರ್ಚವರೆಗೂ ಮುಂದುವರಿಯಲಿದೆ ಎಂದು ಕೇಂದ್ರವು ಸೆ.17ರಂದು ಜಿಎಸ್‌ಟಿ ಮಂಡಳಿ ಸಭೆಯ ಬಳಿಕ ತಿಳಿಸಿತ್ತು.

ರಾಜ್ಯಸಭೆಯಲ್ಲಿ ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೀತಾರಾಮನ್,2020-21 ಮತ್ತು 2021-22 ನೇ ಹಣಕಾಸು ವರ್ಷಗಳಿಗಾಗಿ ರಾಜ್ಯಗಳಿಗೆ ಅನುಕ್ರಮವಾಗಿ 37,134 ಕೋ.ರೂ. ಮತ್ತು 14,664 ಕೋ.ರೂ. ಪರಿಹಾರವನ್ನು ಇನ್ನೂ ಬಿಡುಗಡೆಗೊಳಿಸಬೇಕಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News