2013ರ ಮುಝಪ್ಫರ್‌ನಗರ ಗಲಭೆ ಪ್ರಕರಣ : ಐವರು ಆರೋಪಿಗಳ ಖುಲಾಸೆ

Update: 2021-12-02 18:40 GMT

ಲಕ್ನೋ, ಡಿ. 2: ಮುಝಪ್ಫರ್‌ನಗರದಲ್ಲಿ 2013ರಲ್ಲಿ ನಡೆದ ಗಲಭೆ ಪ್ರಕರಣದ 5 ಮಂದಿ ಆರೋಪಿಗಳನ್ನು ಸಾಕ್ಷಾಧಾರದ ಕೊರತೆಯಿಂದ ಉತ್ತರಪ್ರದೇಶದ ಮುಝಪ್ಫರ್‌ನಗರದ ಸತ್ರ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ. ಆರೋಪಿಗಳಾದ ವಿನೋದ್, ನರೇಶ್, ಆಶೀಷ್, ಸುಂದರ್ ಹಾಗೂ ಸತ್ಯೇಂದ್ರರ ವಿರುದ್ಧ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಬಾಬು ರಾಮ್ ಪ್ರತಿಪಾದಿಸಿದ್ದಾರೆ.

ಮುಝಪ್ಫರ್‌ನಗರದಲ್ಲಿರುವ ಫಾಗುನಾ ಪೊಲೀಸ್ ಠಾಣಾ ವ್ಯಾಪ್ತಿಯ ಅಡಿಯಲ್ಲಿ ಬರುವ ಬಹಾವ್ಡಿ ಗ್ರಾಮದ ನಿವಾಸಿ ನಾಣು, ‘‘2013 ನವೆಂಬರ್ 8ರಂದು ತನ್ನ ಮನೆಗೆ ನುಗ್ಗಿದ ಗುಂಪಿನಲ್ಲಿ ಈ ಐವರು ವ್ಯಕ್ತಿಗಳು ಭಾಗಿಯಾಗಿದ್ದರು. ಈ ಗುಂಪು ಮನೆಗೆ ಬೆಂಕಿ ಹಚ್ಚಿತು ಹಾಗೂ ಮೌಲ್ಯಯುತ ಸೊತ್ತುಗಳನ್ನು ಲೂಟಿ ಮಾಡಿತು’’ ಎಂದು ಆರೋಪಿಸಿದ್ದರು. ಈ ಪ್ರಕರಣವನ್ನು ಉತ್ತರಪ್ರದೇಶ ಪೊಲೀಸ್‌ನ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು. ಅಲ್ಲದೆ, ಐವರು ಆರೋಪಿಗಳ ವಿರುದ್ಧ 2014ರಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ಆರೋಪಿಗಳ ವಿರುದ್ಧ ತನಿಖಾ ತಂಡ ಸಲ್ಲಿಸಿದ ಸಾಕ್ಷಾಧಾರಗಳು ಸಾಕಾಗದು ಎಂದು ಬುಧವಾರ ನ್ಯಾಯಾಲಯ ಪ್ರತಿಪಾದಿಸಿದೆ.

2013 ಸೆಪ್ಟಂಬರ್‌ನಲ್ಲಿ ಆಗಿನ ರಾಜ್ಯ ಸಚಿವ ಸುರೇಶ್ ರಾಣಾ, ಬಿಜೆಪಿ ಶಾಸಕ ಸಂಗೀತ್ ಸೋಮ್ ಹಾಗೂ ಮಾಜಿ ಸಂಸದ ಭರತೇಂದ್ರ ಸಿಂಗ್ ಸೇರಿದಂತೆ ಬಿಜೆಪಿ ನಾಯಕರು ಪ್ರಚೋದನಾಕಾರಿ ಭಾಷಣ ಮಾಡಿದ ಬಳಿಕ ಪಶ್ಚಿಮ ಉತ್ತರಪ್ರದೇಶ ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಈ ಕೋಮು ಹಿಂಸಾಚಾರದಲ್ಲಿ 60 ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಮುಸ್ಲಿಮರು ಸ್ಥಳಾಂತರಗೊಂಡಿದ್ದರು. ಮುಝಪ್ಫರ್‌ನಗರ ಹಾಗೂ ಶಾಮ್ಲಿ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನಡೆದ ಬಗ್ಗೆ ಕೂಡ ವರದಿಯಾಗಿದ್ದವು.

ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಆರೋಪದಲ್ಲಿ 12 ಬಿಜೆಪಿ ನಾಯಕರು ಸೇರಿದಂತೆ ಹಲವು ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಹಿಂಪಡೆಯುವ ರಾಜ್ಯ ಸರಕಾರದ ಮನವಿಗೆ ಉತ್ತರಪ್ರದೇಶದ ವಿಶೇಷ ನ್ಯಾಯಾಲಯ ಮಾರ್ಚ್‌ನಲ್ಲಿ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News