ಪೆಗಾಸಸ್ ಸ್ಪೈವೇರ್ ಎನ್‌ಎಸ್‌ಒ ಸಮೂಹಕ್ಕೆ ನಿಷೇಧ ಪ್ರಸ್ತಾವ ಇಲ್ಲ: ಕೇಂದ್ರ
ಹೊಸದಿಲ್ಲಿ, ಡಿ. 3: ಇಸ್ರೇಲಿ ಸೈಬರ್ ಭದ್ರತಾ ಸಂಸ್ಥೆಯನ್ನು ನಿಷೇಧಿಸದಿರುವ ಬಗ್ಗೆ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನದ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಯಾವುದೇ ರೀತಿಯ ಕಾರಣ ನೀಡಿಲ್ಲ. ಪೆಗಾಸಸ್ ಸ್ಪೈವೇರ್ ಉತ್ಪಾದಕ ಸೈಬರ್ ಭದ್ರತಾ ಸಂಸ್ಥೆ ಎನ್‌ಎಸ್‌ಒ ಟೆಕ್ನಾಲಜೀಸ್ ಸಮೂಹಕ್ಕೆ ನಿಷೇಧ ವಿಧಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಅವರು ಶುಕ್ರವಾರ ಸಂಸತ್ತಿಗೆ ತಿಳಿಸಿದರು.
ದೇಶದ ಪತ್ರಕರ್ತರು, ರಾಜಕೀಯ ನಾಯಕರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರರ ಬೇಹುಗಾರಿಕೆ ನಡೆಸಲು ಪೆಗಾಸಸ್ ಅನ್ನು ಕೇಂದ್ರ ಸರಕಾರ ಬಳಕೆ ಮಾಡಿದೆ ಎಂಬ ಆರೋಪ ಇದೆ. ಭಾರತದಲ್ಲಿ ಎನ್‌ಎಸ್‌ಒ ಸಮೂಹ ಹಾಗೂ ಸೈಬರ್ ಕಣ್ಗಾವಲು ಕ್ಷೇತ್ರದಲ್ಲಿ ಕಾರ್ಯಾ ಚರಿಸುತ್ತಿರುವ ಇನ್ನೊಂದು ಇಸ್ರೇಲಿ ಸಂಸ್ಥೆ ಕ್ಯಾಂಡಿರುವನ್ನು ಯಾಕೆ ನಿಷೇಧಿ ಸಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದರಾದ ವಿಶ್ವಂಭರ್ ಪ್ರಸಾದ್ ನಿಶಾದ್ ಹಾಗೂ ಸುಖ್‌ರಾಮ್ ಸಿಂಗ್ ಯಾದವ್ ಕೇಂದ್ರ ಸರಕಾರವನ್ನು ಪ್ರಶ್ನಿಸಿದರು. ರಾಜೀವ್ ಚಂದ್ರಶೇಖರ್ ಇದಕ್ಕೆ ಪ್ರತ್ಯುತ್ತರ ನೀಡಲಿಲ್ಲ. ಇಸ್ರೇಲಿ ಕಂಪೆನಿಗಳನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿರುವ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಲು ಚಂದ್ರಶೇಖರ್ ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ನಿರಾಕರಿಸಿದರು