ಪೌರತ್ವ ಕಾಯ್ದೆ 'ಮೂಲಭೂತವಾಗಿ ರಾಷ್ಟ್ರವಿರೋಧಿ' : ಶಶಿ ತರೂರ್

Update: 2021-12-04 02:38 GMT

ಹೊಸದಿಲ್ಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ಮೂಲಭೂತವಾಗಿ ರಾಷ್ಟ್ರವಿರೋಧಿ. ಆದ್ದರಿಂದ ಸರ್ಕಾರ ಇದನ್ನು ಅನುಷ್ಠಾನಕ್ಕೆ ತರಬಾರದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಆಗ್ರಹಿಸಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಪಡೆಯಲು ಅವಕಾಶ ಮಾಡಿಕೊಡುವ ಕಾಯ್ದೆಯನ್ನು 2019ರಲ್ಲಿ ಸಂಸತ್ತು ಆಂಗೀಕರಿಸಿತ್ತು. ಇದಕ್ಕೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು.

ರೈತರ ಸುಧೀರ್ಘ ಪ್ರತಿಭಟನೆ ಬಳಿಕ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದ ಬಳಿಕ ಇದೀಗ ಸಿಎಎಯನ್ನು ಕೂಡಾ ವಾಪಾಸು ಪಡೆಯಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.

"ಸಿಎಎ ಮೂಲಭೂತವಾಗಿ ರಾಷ್ಟ್ರವಿರೋಧಿ ಮತ್ತು ಸರ್ಕಾರ ಇದನ್ನು ಅನುಷ್ಠಾನಕ್ಕೆ ತರಬಾರದು ಎಂದು ನಾನು ಆಗ್ರಹಿಸುತ್ತಿದ್ದೇನೆ" ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೀಡಾದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವುದು ಕಾಯ್ದೆಯ ಉದ್ದೇಶ. 2014ರ ಡಿಸೆಂಬರ್ 31ಕ್ಕೆ ಮುನ್ನ ಭಾರತಕ್ಕೆ ಬಂದಿದ್ದ ಇಂಥ ವಲಸಿಗರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸದೇ ಅವರಿಗೆ ಭಾರತೀಯ ಪೌರತ್ವ ನೀಡುವುದು ಉದ್ದೇಶವಾಗಿತ್ತು.
ಸಂಸತ್ತಿನಲ್ಲಿ ಸಿಎಎ ಆಂಗೀಕಾರವಾದ ಬಳಿಕ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ಇದು ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುವಂಥದ್ದು ಹಾಗೂ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎನ್ನುವುದು ಪ್ರತಿಭಟನಾಕಾರರ ಆರೋಪ. ಜತೆಗೆ ಸಿಎಎ ಹಾಗೂ ಎನ್‌ಆರ್‌ಸಿ ಮುಸ್ಲಿವರನ್ನು ಗುರಿ ಮಾಡುವ ಸಲುವಾಗಿ ತಂದ ಕಾಯ್ದೆಗಳು ಎಂದೂ ಪ್ರತಿಭಟನಾಕಾರರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News