ಏಕೀಕೃತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ ನಿಧನ

Update: 2021-12-04 05:12 GMT
Photo: ANI

ಹೊಸದಿಲ್ಲಿ: ತಮಿಳುನಾಡಿನ ಮಾಜಿ ರಾಜ್ಯಪಾಲ ಹಾಗೂ  ಏಕೀಕೃತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊನಿಜೇಟಿ ರೋಸಯ್ಯ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಶನಿವಾರ  ಮುಂಜಾನೆ ಹೈದರಾಬಾದ್‌ನಲ್ಲಿ ನಿಧನರಾದರು.

 88 ವರ್ಷ ವಯಸ್ಸಿನ  ರೋಸಯ್ಯ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದರು ಹಾಗೂ  ಕೆ. ವಿಜಯ ಭಾಸ್ಕರ್ ರೆಡ್ಡಿ ಹಾಗೂ  ವೈ.ಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದಾರೆ. ರೋಸಯ್ಯ ಅವರು ಹಣಕಾಸು ಸಚಿವರಾಗಿ ವಿಧಾನಸಭೆಯಲ್ಲಿ  ಬಜೆಟ್ ಮಂಡಿಸುವುದರಲ್ಲಿ ದಾಖಲೆ ಹೊಂದಿದ್ದಾರೆ.

ವೈ.ಎಸ್. ರಾಜಶೇಖರ ರೆಡ್ಡಿ 2009 ರಲ್ಲಿ ಹಠಾತ್ ನಿಧನದ ನಂತರ ಅಂದಿನ ಹಣಕಾಸು ಸಚಿವ ರೋಸಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗಿತ್ತು. ಆ ನಂತರ ಅವರು ತಮಿಳುನಾಡು ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.

ತೆನಾಲಿ ಸಮೀಪದ ವೇಮೂರು ಗ್ರಾಮದವರಾದ ರೋಸಯ್ಯ ಅವರು ಯುವ ಕಾಂಗ್ರೆಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ ಪ್ರವೇಶಿಸಿದ್ದರು. ಅವರು ಎರಡು ಬಾರಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಹಾಗೂ  ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News