×
Ad

ನೌಕಾಪಡೆ ದಿನದ ಶುಭಾಶಯ ಕೋರಲು ಅಮೆರಿಕ ಯುದ್ಧನೌಕೆಯ ಚಿತ್ರ ಪೋಸ್ಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ಮುಖಂಡರು

Update: 2021-12-04 18:38 IST
Photo: Twitter/@BJP4@JnK

ಹೊಸದಿಲ್ಲಿ: ಶನಿವಾರ ಭಾರತೀಯ ನೌಕಾಪಡೆ ದಿನದ ಅಂಗವಾಗಿ ಶುಭಾಶಯ ಕೋರುವ ಭರದಲ್ಲಿ ಬಿಜೆಪಿ ಸಚಿವರುಗಳು ಹಾಗೂ ಪಕ್ಷದ ಹಲವು ನಾಯಕರು, ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಮತ್ತು ಗೋವಾ ಫಾರ್ವರ್ಡ್ ಪಾರ್ಟಿ ತಮ್ಮ ತಮ್ಮ ಅಧಿಕೃತ ಟ್ವಿಟರ್  ಹ್ಯಾಂಡಲ್‍ಗಳ ಮೂಲಕ ಅಮೆರಿಕಾದ ಯುದ್ಧನೌಕೆಯೊಂದರ ಚಿತ್ರ ಪೋಸ್ಟ್ ಮಾಡಿ ಎಡವಟ್ಟು ಮಾಡಿಕೊಂಡಿವೆ.

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕ,  ಮಹಾರಾಷ್ಟ್ರ ಬಿಜೆಪಿ ಘಟಕ, ಮಧ್ಯಪ್ರದೇಶದ ಬಿಜೆಪಿ ಶಾಸಕ ಗೌರಿ ಶಂಕರ್ ಬಿಸೆನ್, ಗುಜರಾತ್ ಕೃಷಿ ಸಚಿವ ಮುಕೇಶ್ ಪಟೇಲ್, ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಪಿ ಸಿ ಶರ್ಮ ಅದೇ ಅಮೆರಿಕಾ ಯುದ್ಧನೌಕೆಯ ಚಿತ್ರ ಪೋಸ್ಟ್ ಮಾಡಿ ಭಾರತೀಯ ನೌಕಾಪಡೆ ದಿನದ ಶುಭಾಶಯ ಕೋರಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಂಘಟಕ ಮನಮೋಹನ್ ಸಿಂಗ್ ಪಹುಜಾ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿ ಕೂಡ ಇದೇ ಫೋಟೋ ಪೋಸ್ಟ್ ಮಾಡಿವೆ.

ಮೇಲೆ ತಿಳಿಸಿದವರೆಲ್ಲರ ಟ್ವೀಟಿನಲ್ಲಿ ಕಾಣಿಸಿಕೊಂಡ ಅಮೆರಿಕಾ ಯುದ್ಧ ನೌಕೆ  ಫ್ರೀಡಂ-ಕ್ಲಾಸ್ ಲಿಟ್ಟೋರಲ್ ಆಗಿದ್ದು ಇದನ್ನು ಜನವರಿ 2019ರಲ್ಲಿ ಅಮೆರಿಕಾ ನೌಕಾಪಡೆಗೆ ಸೇರಿಸಲಾಗಿತ್ತು.

ಈ ಅಮೆರಿಕಾ ಯುದ್ಧನೌಕೆಯ ಚಿತ್ರವನ್ನು ಭಾರತೀಯ ರಾಜಕಾರಣಿಗಳು ತಪ್ಪಾಗಿ ಪೋಸ್ಟ್ ಮಾಡಿದ್ದು ಇದೇ ಮೊದಲ ಬಾರಿಯಲ್ಲ. ಡಿಸೆಂಬರ್ 4, 2019ರಂದು ಕೂಡ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ ಇದೇ ಚಿತ್ರ ಪೋಸ್ಟ್ ಮಾಡಿ ನೌಕಾಪಡೆ ದಿನದ ಶುಭಾಶಯ ಕೋರಿ ಟೀಕೆಗೊಳಗಾಗಿತ್ತು. ಆಗ ಕೆಲ ಟ್ವಿಟರ್ ಬಳಕೆದಾರರು ##ShameOnCongress ಹ್ಯಾಶ್‍ಟ್ಯಾಗ್ ಬಳಸಿ ಪಕ್ಷವನ್ನು ಟೀಕಿಸಿದ ನಂತರ ಟ್ವೀಟ್  ಡಿಲೀಟ್ ಮಾಡಲಾಗಿತ್ತು.

ಬಿಜೆಪಿ ಕೂಡ ಎರಡು ವರ್ಷದ ಹಿಂದೆ ಇದೇ ಫೋಟೋವನ್ನು ಅದೇ ದಿನ ಶೇರ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News