ಕಳೆದ ವರ್ಷ ಪ್ರುಡಂಟ್ ಟ್ರಸ್ಟ್ ನಿಂದ ಕಾಂಗ್ರೆಸ್ ಗೆ ದೇಣಿಗೆ ಶೇ.93ರಷ್ಟು ಕುಸಿತ, ಬಿಜೆಪಿ ಪಾಲು ಶೇ.2ರಷ್ಟು ಏರಿಕೆ

Update: 2021-12-04 15:50 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪ್ರುಡಂಟ್ ಚುನಾವಣಾ ಟ್ರಸ್ಟ್ 2020-21ನೇ ವಿತ್ತವರ್ಷದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಒಟ್ಟು 245.7 ಕೋ.ರೂ.ಗಳ ದೇಣಿಗೆ ನೀಡಿದ್ದು, 2019-20ನೇ ವಿತ್ತ ವರ್ಷದಲ್ಲಿ ವಿತರಿಸಿದ್ದ 271 ಕೋ.ರೂ.ಗಳಿಗೆ ಹೋಲಿಸಿದರೆ ಶೇ.9ಕ್ಕೂ ಅಧಿಕ ಇಳಿಕೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಶೇ.93ಕ್ಕೂ ಹೆಚ್ಚು ಕುಸಿದಿದೆ. 2019-20ನೇ ವಿತ್ತವರ್ಷದಲ್ಲಿ ಕಾಂಗ್ರೆಸ್ ಗೆ 31 ಕೋ.ರೂ.ಗಳು ಸಂದಾಯವಾಗಿದ್ದರೆ 2020-21ರಲ್ಲಿ ಕೇವಲ ಎರಡು ಕೋ.ರೂ.ಗಳಿಗೆ ಅದು ತೃಪ್ತಿಪಟ್ಟುಕೊಂಡಿದೆ ಎನ್ನುವುದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಟ್ರಸ್ಟ್ ನ ದೇಣಿಗೆಗಳ ವಿಶ್ಲೇಷಣೆಯು ತೋರಿಸಿದೆ  ಎಂದು indianexpress.com ವರದಿ ಮಾಡಿದೆ.

ಆಪ್ ಗೂ ದೇಣಿಗೆಯು ಶೇ.84ಕ್ಕೂ ಅಧಿಕ ಕುಸಿತವನ್ನು ಕಂಡಿದೆ. ಹಿಂದಿನ ವರ್ಷ ಅದು 11.2 ಕೋ.ರೂ.ಗಳನ್ನು ಪಡೆದಿದ್ದರೆ ಈ ವರ್ಷ ಅದು ಕೇವಲ 1.7 ಕೋ.ರೂ.ಗೆ ಇಳಿದಿದೆ.

ಭಾರತದ ಅತ್ಯಂತ ಶ್ರೀಮಂತ ಚುನಾವಣಾ ಟ್ರಸ್ಟ್ ಆಗಿರುವ ಪ್ರುಡಂಟ್ 2013-14ರಿಂದ ಬಿಜೆಪಿ ಪಾಲಿಗೆ ಚಿನ್ನದ ಗಣಿಯಾಗಿದೆ. ಹಿಂದಿನ ವಿತ್ತವರ್ಷದ 203 ಕೋ.ರೂ.ಗೆ ಹೋಲಿಸಿದರೆ ಈ ವಿತ್ತವರ್ಷದಲ್ಲಿ ಅದು 209 ಕೋ.ರೂ.ಗಳನ್ನು ಪಡೆದಿದ್ದು. ಶೇ.2ರಷ್ಟು ಏರಿಕೆಯಾಗಿದೆ. ಹಿಂದಿನ ವಿತ್ತವರ್ಷದಲ್ಲಿ ಪ್ರುಡಂಟ್ ನ ಒಟ್ಟು ದೇಣಿಗೆಗಳ ಶೇ.74ರಷ್ಟು ಬಿಜೆಪಿ ಬೊಕ್ಕಸಕ್ಕೆ ಸೇರಿದ್ದರೆ ಈ ವರ್ಷ ಅದು ಶೇ.85ಕ್ಕೇರಿದೆ.

ಪ್ರುಡಂಟ್ ನಿಂದ 2020-21ನೇ ವಿತ್ತವರ್ಷಕ್ಕೆ ದೇಣಿಗೆಗಳಂತೆ ಜೆಡಿಯು 25 ಕೋ.ರೂ.ಗಳನ್ನು ಪಡೆಯುವ ಮೂಲಕ ಎರಡನೇ ಅತ್ಯಂತ ದೊಡ್ಡ ಫಲಾನುಭವಿಯಾಗಿದೆ. ದೇಣಿಗೆ ಪಡೆದ ಪಕ್ಷಗಳಲ್ಲಿ ಎನ್ಸಿಪಿ (5 ಕೋ.ರೂ.) ಮತ್ತು ಆರ್ಜೆಡಿ (2 ಕೋ.ರೂ.) ಸೇರಿವೆ. ಆಸಕ್ತಿಕರವೆಂದರೆ ಪ್ರುಡಂಟ್ ಟ್ರಸ್ಟ್ 2020-21ನೇ ಸಾಲಿನ ಫಲಾನುಭವಿಗಳ ತನ್ನ ಪಟ್ಟಿಯಿಂದ ಶಿವಸೇನೆ, ಅಕಾಲಿ ದಳ, ಎಸ್ಪಿ, ಜನನಾಯಕ ಜನತಾ ಪಾರ್ಟಿ ಮತ್ತು ಎಲ್ಜೆಪಿ ಸೇರಿದಂತೆ ಕೆಲವು ಪಕ್ಷಗಳನ್ನು ಕೈಬಿಟ್ಟಿದೆ.

ಪ್ರುಡಂಟ್ ಚುನಾವಣಾ ಟ್ರಸ್ಟ್ ದೇಶದ ಅತ್ಯಂತ ದೊಡ್ಡ ಚುನಾವಣಾ ಟ್ರಸ್ಟ್ ಗಳಲ್ಲೊಂದಾಗಿದ್ದು, ಚುನಾವಣಾ ಟ್ರಸ್ಟ್ ಗಳಿಗೆ ಎಲ್ಲ ಕಾರ್ಪೊರೇಟ್ ದೇಣಿಗೆಗಳ ಶೇ.90ಕ್ಕೂ ಅಧಿಕ ಪಾಲು ಅದರ ಬೊಕ್ಕಸಕ್ಕೆ ಸೇರುತ್ತದೆ.

ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಿಸ್ (100 ಕೋ.ರೂ.), ಹಾಲ್ದಿಯಾ ಎನರ್ಜಿ ಇಂಡಿಯಾ ಲಿ.(25 ಕೋ.ರೂ.), ಮೇಘಾ ಇಂಜಿನಿಯರಿಂಗ್ (22 ಕೋ.ರೂ.), ಭಾರ್ತಿ ಏರ್ಟೆಲ್(15 ಕೋ.ರೂ.), ಭಾರ್ತಿ ಇನ್ಫ್ರಾಟೆಲ್ (10 ಕೋ.ರೂ.) ಹಾಗೂ ಫಿಲಿಪ್ಸ್ ಕಾರ್ಬನ್ ಬ್ಲಾಕ್ ಮತ್ತು ಟೊರೆಂಟ್ ಗ್ರೂಪ್ (ತಲಾ 20 ಕೋ.ರೂ) ಇವು ಪ್ರುಡೆಂಟ್ ಫಂಡ್ಗೆ ಚುನಾವಣಾ ದೇಣಿಗೆಗಳನ್ನು ಸಲ್ಲಿಸುವ ಕೆಲವು ಪ್ರಮುಖ ಕಂಪನಿಗಳಾಗಿವೆ.

ಕಳೆದ ಐದು ವರ್ಷಗಳ ಟ್ರಸ್ಟ್ ದೇಣಿಗೆಗಳ ವಿಶ್ಲೇಷಣೆಯು ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಸಿಂಹಪಾಲನ್ನು ಪಡೆದುಕೊಂಡಿದೆ ಮತ್ತು ಕಾಂಗ್ರೆಸ್ನ ಪಾಲು ಗಣನೀಯವಾಗಿ ಕಡಿಮೆಯಾಗಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News