2017ರ ರೋಡ್‌ಶೋ ಪ್ರಕರಣ: ಹಾರ್ದಿಕ್ ಪಟೇಲ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್
ಅಹ್ಮದಾಬಾದ್, ಡಿ.4: ಕಾಂಗ್ರೆಸ್ ನಾಯಕ ಹಾರ್ದಿಕ ಪಟೇಲ್ 2017 ಡಿಸೆಂಬರ್‌ನಲ್ಲಿ ರೋಡ್‌ಶೋ ನಡೆಸಿದ್ದಕ್ಕಾಗಿ ಅವರ ವಿರುದ್ಧ ಅಹ್ಮದಾಬಾದ್‌ನ ಬೋಪಾಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನ್ನು ಗುಜರಾತ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಅಹ್ಮದಾಬಾದ್‌ನಲ್ಲಿ ಪಾಟಿದಾರ್ ಸಮುದಾಯದ ಬಾಹುಳ್ಯದ ಪ್ರದೇಶಗಳ ಮೂಲಕ ಹಾದು ಹೋಗಿದ್ದ ಬೋಪಾಲ್‌ನಿಂದ ನಿಕೋಲ್‌ವರೆಗಿನ 15 ಕಿ.ಮೀ.ಉದ್ದದ ರೋಡ್‌ಶೋ ಅನ್ನು ಪೊಲೀಸರು ಅನುಮತಿ ನಿರಾಕರಿಸಿದ್ದರೂ ನಡೆಸಲಾಗಿತ್ತು.
ಅಹ್ಮದಾಬಾದ್ ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದೋಷಾರೋಪಣ ಪಟ್ಟಿ ಮತ್ತು ನಂತರದ ಕ್ರಿಮಿನಲ್ ಪ್ರಕರಣವನ್ನೂ ಉಚ್ಚ ನ್ಯಾಯಾಲಯದ ನ್ಯಾ.ಗೀತಾ ಗೋಪಿ ಅವರು ತನ್ನ ಡಿ.1ರ ತೀರ್ಪಿನಲ್ಲಿ ರದ್ದುಗೊಳಿಸಿದ್ದಾರೆ.
ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಹಾಗೂ ಇತರ ಇಬ್ಬರಾದ ರಾಜುಭಾಯಿ ಪಟೇಲ್ ಮತ್ತು ಸುರೇಶಭಾಯಿ ಪಟೇಲ್ ಅವರನ್ನು ಆರೋಪಿಗಳೆಂದು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು.
ರಾಜುಭಾಯಿ ಮತ್ತು ಸುರೇಶಭಾಯಿ ರ್ಯಾಲಿಗಾಗಿ ಅನುಮತಿಯನ್ನು ಕೋರಿದ್ದು,ಅದನ್ನು 2017,ಡಿ.10ರಂದು ತಿರಸ್ಕರಿಸಲಾಗಿತ್ತು. ಹೀಗಿದ್ದರೂ ಆರೋಪಿಗಳು ಇತರರೊಂದಿಗೆ ಸೇರಿಕೊಂಡು ಮರುದಿನ ರೋಡ್‌ಶೋ ನಡೆಸಿದ್ದರು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು.
ಬೋಪಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಳಿಗೆ ಹಾಜರಾಗದ್ದಕ್ಕೆ ಅಹ್ಮದಾಬಾದ್ ಗ್ರಾಮೀಣ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2020 ಫೆಬ್ರವರಿಯಲ್ಲಿ ಹಾರ್ದಿಕ ವಿರುದ್ಧ ಜಾಮೀನುರಹಿತ ವಾರಂಟ್‌ನ್ನು ಹೊರಡಿಸಿತ್ತು. ಈ ವರ್ಷ ಗುಜರಾತ್ ಉಚ್ಚ ನ್ಯಾಯಾಲಯವು ವಿಚಾರಣಾ ನ್ಯಾಯಾಲಯವು ವಿನಾಯಿತಿಯನ್ನು ನೀಡದಿದ್ದರೆ ಪ್ರತಿ ವಿಚಾರಣೆಗೂ ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ವಾರಂಟ್‌ನ್ನು ಜಾಮೀನುಸಹಿತ ವಾರಂಟ್‌ನ್ನಾಗಿ ಪರಿಷ್ಕರಿಸಿತ್ತು.