ಹಕ್ಕುಗಳನ್ನು ಮರಳಿ ಪಡೆಯಲು ಜಮ್ಮುಕಾಶ್ಮೀರ ಜನರು ರೈತರಂತೆ ‘ಬಲಿದಾನ’ ಮಾಡಬೇಕಾಗಬಹುದು: ಫಾರೂಕ್ ಅಬ್ದುಲ್ಲಾ

Update: 2021-12-05 17:02 GMT

ಶ್ರೀನಗರ, ಡಿ. 5: ಜ್ಮು ಕಾಶ್ಮೀರದ ರಾಜ್ಯ ಹಾಗೂ ವಿಶೇಷ ಸ್ಥಾನಮಾನ ಮರು ಸ್ಥಾಪಿಸಲು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರಂತೆ ಜಮ್ಮು ಹಾಗೂ ಕಾಶ್ಮೀರದ ಜನರು ಕೂಡ ‘ಬಲಿದಾನ’ ಮಾಡಬೇಕಾಗಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ)ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ರವಿವಾರ ಹೇಳಿದ್ದಾರೆ.

ಇಲ್ಲಿನ ನಸೀಮ್‌ ಬಾಗ್ ನಲ್ಲಿ ನಡೆದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸ್ಥಾಪಕ ಶೇಕ್ ಮುಹಮ್ಮದ್ ಅಬ್ದುಲ್ಲಾ ಅವರ 116ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಎನ್ಸಿ ಯುವ ಘಟಕದ ಸಮಾವೇಶದಲ್ಲಿ ಮಾತನಾಡಿದ ಅವರು, ತನ್ನ ಪಕ್ಷ ಹಿಂಸಾಚಾರಕ್ಕೆ ಬೆಂಬಲ ನೀಡುವುದಿಲ್ಲ ಎಂದರು. ರೈತರು ಒಂದು ವರ್ಷ ಕಾಲ ಹೋರಾಟ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ನವೆಂಬರ್ 29ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಕೃಷಿ ಕಾಯ್ದೆಯನ್ನು ರದ್ದುಪಡಿಸುವ ವಿಧೇಯಕ ಅಂಗೀಕರಿಸಿದ್ದರು.

‘‘ರೈತರು 11 ತಿಂಗಳು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಸಂದರ್ಭ 700ಕ್ಕೂ ಅಧಿಕ ರೈತರು ಸಾವನ್ನಪ್ಪಿದರು. ರೈತರ ಬಲಿದಾನದ ಬಳಿಕ ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿತು. ನಮ್ಮ ಹಕ್ಕನ್ನು ಹಿಂದೆ ಪಡೆಯಲು ನಾವು ಕೂಡ ಬಲಿದಾನ ಮಾಡಲು ಸಾಧ್ಯವಿಲ್ಲವೇ ?’’ ಎಂದು ಅವರು ಪ್ರಶ್ನಿಸಿದ್ದಾರೆ.

‘‘ಇದನ್ನು ನೆನಪಿಡಿ, ವಿಧಿ 375, 35-ಎ ಹಾಗೂ ರಾಜ್ಯ ಸ್ಥಾನಮಾನವನ್ನು ಹಿಂಪಡೆಯುವುದಾಗಿ ನಾವು ಭರವಸೆ ನೀಡುತ್ತೇವೆ. ಅಲ್ಲದೆ, ನಾವು ಯಾವುದೇ ಬಲಿದಾನಕ್ಕೆ ಸಿದ್ಧರಿದ್ದೇವೆ’’ ಎಂದು ಅಬ್ದುಲ್ಲಾ ಹೇಳಿದ್ದಾರೆ. ನಾವು ಭ್ರಾತೃತ್ವದ ವಿರೋಧಿಗಳಲ್ಲ ಹಾಗೂ ಹಿಂಸಾಚಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News