​ಸುಲಿಗೆ ಪ್ರಕರಣ : ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಹೊರದೇಶ ಪ್ರಯಾಣಕ್ಕೆ ತಡೆ

Update: 2021-12-06 01:37 GMT

ಮುಂಬೈ: ಲುಕ್ ಔಟ್ ಸುತ್ತೋಲೆಯ ಕಾರಣದಿಂದಾಗಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ರವಿವಾರ ರಾತ್ರಿ ತಡೆಯೊಡ್ಡಿದರು.

ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಈ ನಟಿ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿತ್ತು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನಟಿ ದುಬೈಗೆ ಪ್ರಯಾಣ ಬೆಳೆಸಲು ಉದ್ದೇಶಿಸಿದ್ದರು. ಅವರನ್ನು ಅಲ್ಪಕಾಲ ವಿಚಾರಣೆಗೆ ಗುರಿಪಡಿಸಿದ ಬಳಿಕ ಬಿಡುಗಡೆ ಮಾಡಿ ಏಜೆನ್ಸಿಯ ತನಿಖೆಗಾಗಿ ದೆಹಲಿಯಲ್ಲಿ ಹಾಜರಾಗುವಂತೆ ಸೂಚಿಸಲಾಯಿತು. ದೆಹಲಿ ಕಚೇರಿಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಡಿ ಹೊಸ ಸಮನ್ಸ್ ನೀಡಲಿದೆ ಎಂದು ತಿಳಿದು ಬಂದಿದೆ.

ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ 200 ಕೋಟಿ ರೂಪಾಯಿ ಹಣ ಅವ್ಯವಹಾರ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಲ್ಲಿ ತನಿಖಾ ಏಜೆನ್ಸಿ ಆರೋಪಪಟ್ಟಿ ಸಲ್ಲಿಸಿತ್ತು. ಚಂದ್ರಶೇಖರ್ ತಿಹಾರ್ ಜೈಲಿನಲ್ಲಿದ್ದ ಅವಧಿಯಲ್ಲಿ ಉದ್ಯಮಿಯ ಪತ್ನಿಯೊಬ್ಬರಿಂದ 200 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು.

ಚಂದ್ರಶೇಖರ್, ಫೆರ್ನಾಂಡಿಸ್ ಜತೆ ಹಣಕಾಸು ವ್ಯವಹಾರ ಹೊಂದಿದ್ದನ್ನು ತನಿಖಾ ಏಜೆನ್ಸಿ ಪತ್ತೆಮಾಡಿತ್ತು. 52 ಲಕ್ಷ ರೂ. ಮೌಲ್ಯದ ಒಂದು ಕುದುರೆ ಹಾಗೂ 9 ಲಕ್ಷ ರೂಪಾಯಿಯ ಒಂದು ಪರ್ಶಿಯನ್ ಬೆಕ್ಕು ಸೇರಿದಂತೆ 10 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಚಂದ್ರಶೇಖರ್, ಫೆರ್ನಾಂಡಿಸ್‌ಗೆ ನೀಡಿದ್ದ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಈ ಅಪರಾಧ ಪ್ರಕರಣದಲ್ಲಿ ಆರೋಪಿಯಿಂದ ಹಣ ಬಾಲಿವುಡ್ ನಟಿಗೆ ವರ್ಗಾವಣೆಯಾದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನಟಿಯನ್ನು ಮತ್ತೆ ವಿಚಾರಣೆಗೆ ಗುರಿಪಡಿಸಲು ನಿರ್ಧರಿಸಲಾಗಿದೆ. ಫೆರ್ನಾಂಡಿಸ್ ಜತೆಗೆ ನಟಿ ನೋರಾ ಫತೇಹಿ ಅವರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News