ಕೊರೋನ ಹೆಸರಿನಲ್ಲಿ ಸಮಾಜದಲ್ಲಿ ಅನಗತ್ಯ ಭೀತಿ ?

Update: 2021-12-06 03:14 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಡಿ.5: ಕಳೆದ ಸುಮಾರು ಒಂದೂವರೆ ವರ್ಷದಿಂದ ನಾವು ಕೊರೋನ ಸಾಂಕ್ರಾಮಿಕದ ಜತೆ ಜೀವಿಸುತ್ತಿದ್ದೇವೆ. ಕಣ್ಣಿಗೆ ಕಾಣದ ಒಂದು ವೈರಸ್ ಸಾಕಷ್ಟು ಸಾವು ನೋವುಗಳಿಗೂ ಕಾರಣವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಕೊರೋನ ಭೀತಿಯಲ್ಲಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್ ಎಂಬ ಜನರ ‘ಬದುಕಿನ ಬುತ್ತಿಯ ಮೇಲಿನ ಅಘೋಷಿತ ನಿರ್ಬಂಧ’ ಇಂದಿಗೂ ಬಡ, ಮಧ್ಯಮ ವರ್ಗದವರನ್ನು ಸಂಕಷ್ಟದ ಕೂಪದಿಂದ ಹೊರಬರಲಾಗದೆ ಒದ್ದಾಡುವಂತೆ ಮಾಡಿದೆ. ಕೊರೋನ ಎರಡನೆ ಅಲೆಯ ಬಳಿಕವೂ ಜನರು ಆರ್ಥಿಕವಾಗಿ ಇನ್ನೂ ಚೇತರಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಇದೀಗ ಕೊರೋನದ ರೂಪಾಂತರಿ ಹೊಸ ಪ್ರಭೇದದ ಪತ್ತೆಯೊಂದಿಗೆ ಜನ ಮಾನಸದಲ್ಲಿ ಮತ್ತೆ ಭೀತಿಯನ್ನು ಹುಟ್ಟಿಸುವ ಪ್ರಯತ್ನವೂ ಎಗ್ಗಿಲ್ಲದೆ ಸಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ನಾವು 2020ರ ಮಾರ್ಚ್‌ನಿಂದ 2021ರ ಡಿಸೆಂಬರ್ 2ರವರೆಗೆ ದ.ಕ. ಜಿಲ್ಲೆಯಲ್ಲಿ ಅಧಿಕೃತವಾಗಿ ದಾಖಲಾಗಿರುವ ಕೊರೋನ ಸೋಂಕಿತರು ಹಾಗೂ ಮೃತಪಟ್ಟವರ ಅಂಕಿ ಅಂಶಗಳನ್ನು ಗಮನಿಸಿದರೆ, ಕೊರೋನ ಆರಂಭಗೊಂಡಾಗ ಸಮಾಜದಲ್ಲಿ ಹುಟ್ಟು ಹಾಕಲಾಗಿದ್ದ ಸಾವಿನ ಭಯವೇ ಮಿಥ್ಯ ಎಂದೆನ್ನುವಂತಿದೆ. ಕೊರೋನ ಬಂದರೆ ಸಾವೇ ಗತಿ, ಕೊರೋನ ಮರಣ ಮೃದಂಗ, ರಣಕೇಕೆ ಎಂಬೆಲ್ಲಾ ಶೀರ್ಷಿಕೆಯೊಂದಿಗೆ ಜನರಲ್ಲಿ ಹುಟ್ಟುಹಾಕಲಾಗಿದ್ದು ಕೇವಲ ಭಯ ಮಾತ್ರ. ಈ ಒಂದೂವರೆ ವರ್ಷಗಳ ಕೊರೋನ ಅವಧಿಯಲ್ಲಿ ಸಂಭವಿಸಿರುವ ಸಾವುಗಳ ಪ್ರಮಾಣಕ್ಕೂ, ಅದಕ್ಕೂ ಮೊದಲು ವಾಸ್ತವದಲ್ಲಿ, ಸಹಜವಾಗಿ ಸಂಭವಿಸುತ್ತಿದ್ದ ಸಾವಿನ ಪ್ರಮಾಣಗಳಿಗೂ ಹೆಚ್ಚಿನ ವ್ಯತ್ಯಾಸಗಳೇ ಇಲ್ಲ ಎಂಬುದನ್ನು ಅಧಿಕೃತ ಅಂಕಿಅಂಶಗಳು ಬಹಿರಂಗ ಪಡಿಸುತ್ತಿವೆ.

2020ರ ಮಾಚ್‌ರ್ನಿಂದ 2021ರ ಡಿಸೆಂಬರ್ 2ರವರೆಗೆ ದ.ಕ. ಜಿಲ್ಲೆಯಲ್ಲಿ ಅಧಿಕೃತವಾಗಿ ದಾಖಲಾಗಿರುವ ಕೊರೋನ ಸೋಂಕಿತರ ಸಂಖ್ಯೆ 1,15,914. ಇದೇ ಅವಧಿಯಲ್ಲಿ ಕೊರೋನ ಕಾರಣದಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 1,694 (2020ರ ಮೊದಲ ಅಲೆಯಲ್ಲಿ 740, 2021ರ ಎರಡನೇ ಅಲೆಯಲ್ಲಿ 954). ಅಂದರೆ ಅಧಿಕೃತವಾಗಿ ದೃಢಪಟ್ಟಿರುವ ಒಟ್ಟು ಕೊರೋನ ಪ್ರಕರಣಗಳಲ್ಲಿ ಮೃತರ ಪ್ರಮಾಣ ಶೇ. 1.46 ಮಾತ್ರ. ದೇಶದ ಮತ್ತು ಅಂತರ್‌ ರಾಷ್ಟ್ರೀಯ ಮಟ್ಟದ ತಜ್ಞರ ಪ್ರಕಾರ ವೈರಸ್ ಪ್ರಕರಣಗಳು ಅಧಿಕೃತವಾಗಿ ದಾಖಲಾಗುವುದಕ್ಕಿಂತ ಸುಮಾರು 10ರಿಂದ 15 ಪಟ್ಟು ಹೆಚ್ಚಿರಬಹುದು, ಮೃತರ ಸಂಖ್ಯೆಯು 5-7 ಪಟ್ಟು ಹೆಚ್ಚಿರಬಹುದು. ಹಾಗೆ ಲೆಕ್ಕ ಹಾಕಿದರೆ, ಸುಮಾರು 20 ಲಕ್ಷ ಜನಸಂಖ್ಯೆಯಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳು 11 ಲಕ್ಷದಿಂದ 17 ಲಕ್ಷ (ಜನಸಂಖ್ಯೆಯ 58-85 ಶೇ.) ಆಗುತ್ತದೆ, ಮೃತರ ಸಂಖ್ಯೆಯು 8,470-11,858 ಆಗುತ್ತದೆ. ಇವನ್ನೇ ಪರಿಗಣಿಸಿದರೂ ಸಾವಿನ ಪ್ರಮಾಣವು ಸೋಂಕಿತರ ಶೇ. 0.7ರಷ್ಟೇ ಆಗುತ್ತದೆ.

ಆದರೆ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ ಸಂಭವಿಸಿರುವ ಒಟ್ಟು ಸಾವುಗಳ ಅಂಕಿಅಂಶಗಳನ್ನು ನೋಡಿದಾಗ ಕೊರೋನ ಕಾರಣದಿಂದ ಸಂಭವಿಸಿರುವ ಸಾವುಗಳು ಅಷ್ಟೇನೂ ಅಧಿಕವಿಲ್ಲ, ಭಯ ಹುಟ್ಟಿಸುವ ಮಟ್ಟದಲ್ಲಂತೂ ಇಲ್ಲವೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯ ಹಾಗೂ ಜಿಲ್ಲೆಯ ಅಂಕಿ-ಅಂಶಗಳ ಇಲಾಖೆಯಿಂದ ಪಡೆದಿರುವ ಮಾಹಿತಿಯಂತೆ, ದಕ್ಷಿಣ ಕನ್ನಡದಲ್ಲಿ 2018ರಲ್ಲಿ 20,816 ಸಾವುಗಳಾಗಿದ್ದರೆ, 2019ರಲ್ಲಿ 21,228 ಸಾವುಗಳಾಗಿವೆ.

ಅದೇ 2020ರಲ್ಲಿ, ಕೊರೋನ ಮೊದಲ ಆಲೆಯಲ್ಲಿ 740 ಸಾವುಗಳು ದಾಖಲಾಗಿರುವಲ್ಲಿ, ಅವೂ ಸೇರಿದಂತೆ ಒಟ್ಟು ಸಾವುಗಳು 20,569 ಆಗಿವೆ, ಅಂದರೆ ಕೊರೋನ ಕಾರಣವೂ ಸೇರಿ ಒಟ್ಟು ಸಾವುಗಳು ಕೊರೋನ ಇಲ್ಲದಿದ್ದ 2019ಕ್ಕಿಂತ ಕಡಿಮೆ ಇವೆ! 2021ರ ಅಕ್ಟೋಬರ್ ಅಂತ್ಯದವರೆಗೆ 21,576 ಸಾವುಗಳು ದಾಖಲಾಗಿದ್ದು, ಎರಡನೇ ಅಲೆಯಲ್ಲಾಗಿರುವ 954 ಸಾವುಗಳಲ್ಲಿ ಹೆಚ್ಚಿನವು ಇದರಲ್ಲೇ ಸೇರಿವೆ.

ಕಳೆದ ಒಂದೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೊರೋನದಿಂದಾಗಿ ಆಗಿರುವ ಸಾವುಗಳು ಅದೇ ಅವಧಿಯಲ್ಲಾಗಿರುವ ಒಟ್ಟು ಸಾವುಗಳ ಶೇ. 5-7ರಷ್ಟಿರಬಹುದು ಎಂದಾಗುತ್ತದೆ. ಒಟ್ಟು 11-17 ಲಕ್ಷ ಜನರಿಗೆ ಈಗಾಗಲೇ ಕೊರೋನ ಸೋಂಕು ತಗಲಿಯಾಗಿದೆ ಎಂದಾದರೆ, ಅವರಲ್ಲಿ ಸಾವಿನ ಪ್ರಮಾಣವು 0.099- 0.27ಶೇ., ಅಂದರೆ ಸಾವಿರ ಸೋಂಕಿತರಲ್ಲಿ ಒಬ್ಬರಿಂದ ಮೂವರಷ್ಟು ಎಂದಾಗುತ್ತದೆ.

ಈ ಅಂಕಿ ಅಂಶಗಳನ್ನು, ಕೊರೋನದಿಂದ ಮೃತರಾದವರಲ್ಲಿ ಶೇ. 95ರಷ್ಟು ಮಂದಿ ಮೊದಲೇ ಇತರ ಗಂಭೀರ ಕಾಯಿಲೆಗಳನ್ನು ಹೊಂದಿದವರಾಗಿದ್ದರು ಎನ್ನುವುದನ್ನೂ ಪರಿಗಣಿಸಿದರೆ, ಮರಣ ಮೃದಂಗ ಎಂದೆಲ್ಲ ಬೊಬ್ಬಿರಿದು ಭಯ ಹುಟ್ಟಿಸಿದ ಕೊರೋನದಿಂದ ನಿಜಕ್ಕೂ ಏನಾಯಿತು ಎನ್ನುವ ವಾಸ್ತವವು ಅರ್ಥವಾಗುತ್ತದೆ. ಕೊರೋನ ಆರಂಭಗೊಂಡಾಗಲೇ ಇವನ್ನೆಲ್ಲ ವೈಜ್ಞಾನಿಕವಾಗಿ ಅಂದಾಜಿಸಿ, ವಿವೇಚನೆಯಿಂದ ಕಾರ್ಯತಂತ್ರಗಳನ್ನು ರೂಪಿಸಿ, ಜನರಿಗೆ ಸರಿಯಾದ ಮಾಹಿತಿಯನ್ನು ನೀಡಿ, ಸಾಕ್ಷ್ಯಾಧಾರಿತವಾದ, ಉಪಯುಕ್ತವಷ್ಟೇ ಆದ ಚಿಕಿತ್ಸೆಗಳನ್ನಷ್ಟೇ ಸೂಚಿಸಿ, ಎಚ್ಚರಿಕೆಯ ನಡೆಗಳನ್ನಿಟ್ಟಿದ್ದರೆ ಈ ಸಾವುಗಳಲ್ಲೂ ಹಲವನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು ಎನ್ನುವ ಕಟು ಸತ್ಯವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಜಿಲ್ಲೆಯಲ್ಲಿ ಕೊರೋನ ಸೋಂಕು ಮತ್ತು ಅದರಿಂದಾದವೆನ್ನಲಾದ ಸಾವುಗಳ ಅಂಕಿಅಂಶಗಳನ್ನು ಇನ್ನಷ್ಟು ವಿಶ್ಲೇಷಿಸಿದರೆ ಮತ್ತಷ್ಟು ಸತ್ಯಗಳು ಗೋಚರಿಸುತ್ತವೆ. ಪ್ರಥಮ ಅಲೆಯಲ್ಲಿ ದಾಖಲಾದ ಒಟ್ಟು ಸೋಂಕಿತರ ಪ್ರಕರಣ 34,431 ಹಾಗೂ ಆ ಅವಧಿಯಲ್ಲಿ ಮೃತಪಟ್ಟವರು 740. ಎರಡನೇ ಅಲೆಯಲ್ಲಿ ದಾಖಲಾದ ಒಟ್ಟು 81473 ಪ್ರಕರಣಗಳಲ್ಲಿ 954 ಮಂದಿ ಮೃತಪಟ್ಟಿದ್ದಾರೆ. ಇವನ್ನಷ್ಟೇ ಪರಿಗಣಿಸಿದರೆ ಪ್ರಥಮ ಅಲೆಯ ಸೋಂಕಿತರಲ್ಲಿ ಮೃತರ ಪ್ರಮಾಣ ಶೇ. 2.14 ಆಗಿದ್ದರೆ, ಎರಡನೇ ಅಲೆಯಲ್ಲಿ ಈ ಪ್ರಮಾಣ ಶೇ. 1.17. ಮೊದಲ ಅಲೆಯಲ್ಲಿ ಮೃತರ ಪ್ರಮಾಣ ಹೆಚ್ಚಿರುವುದಕ್ಕೆ ವೈದ್ಯರ ಅನನುಭವ, ವೈದ್ಯಕೀಯ ವ್ಯವಸ್ಥೆಗಳ ಕೊರತೆ, ಜನರಿಗೆ ಕೊರೋನದ ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿ ದೊರೆಯದೆ ಅತಿ ತಡವಾಗಿ ಆಸ್ಪತ್ರೆಗಳಿಗೆ ಬರುವಂತಾದುದು ಮುಂತಾದವು ಕಾರಣಗಳಾಗಿರಬಹುದು; ಎರಡನೆ ಅಲೆಯ ವೇಳೆಗೆ ಇವು ತುಸು ಸುಧಾರಣೆಯಾದುದರಿಂದ ಸಾವಿನ ಪ್ರಮಾಣವು ಕಡಿಮೆಯಾಗಿರಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳಿರುವುದರಿಂದ ತೀವ್ರ ನಿಗಾ ಘಟಕಗಳು ಹಾಗೂ ಆಮ್ಲಜನಕದ ಲಭ್ಯತೆಯಲ್ಲಿ ವಿಶೇಷವಾದ ಸಮಸ್ಯೆಗಳಾಗದಿರುವುದು ಕೂಡ ಜಿಲ್ಲೆಯಲ್ಲಿ ಸಾವಿನ ಪ್ರಮಾಣವು ಕಡಿಮೆುರುವುದಕ್ಕೆ ಕಾರಣವಾಗಿರಬಹುದು.

ಇನ್ನು ವಯೋಮಾನದ ಆಧಾರದಲ್ಲಿ ನೋಡಿದರೆ, ಈ ಅವಧಿಯಲ್ಲಿ ಮೃತಪಟ್ಟ 1,694 ಮಂದಿಯಲ್ಲಿ 20 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆಯು ಐದು ಮಾತ್ರ; ಅದರಲ್ಲಿ ಮೂರು ಮಕ್ಕಳು 0-5 ವರ್ಷ ವಯಸ್ಸಿನವರು. ಈ ಐದು ಮಕ್ಕಳು ಕೂಡಾ ಮೊದಲ ಅಲೆಯ ವೇಳೆಯಲ್ಲೇ ಮೃತರಾಗಿದ್ದು, ಎರಡನೇ ಅಲೆಯಲ್ಲಿ ಸೋಂಕಿತರು ಹೆಚ್ಚಿದ್ದರೂ, 0-20 ವಯೋಮಾನದಲ್ಲಿ ಯಾರೊಬ್ಬರೂ ಮೃತರಾಗಿಲ್ಲ. ಒಟ್ಟು 1694 ಸಾವುಗಳಲ್ಲಿ ಮೃತ ಮಕ್ಕಳ ಪ್ರಮಾಣವು ಶೇ. 0.3ರಷ್ಟಾಗುತ್ತದೆ. ಒಟ್ಟು 1,15,914 ಸೋಂಕಿತರಲ್ಲಿ 0-20ರೊಳಗಿನವರ ಸಂಖ್ಯೆಯು 19,022, ಅಂದರೆ ಒಟ್ಟು ಸೋಂಕಿತರಲ್ಲಿ ಶೇ.16.5 ಆಗಿದೆ. ಸೋಂಕಿತ 19,022 ಮಕ್ಕಳಲ್ಲಿ 5 ಮಕ್ಕಳು ಮೃತಪಟ್ಟಿರುವುದರಿಂದ ಆ ಪ್ರಮಾಣವು ಶೇ. 0.03 ಅಷ್ಟೇ ಆಗುತ್ತದೆ. ಈ ವಯೋಮಾನದವರು ಜನಸಂಖ್ಯೆಯ ಶೇ.34 ರಷ್ಟು ಇದ್ದರೂ ಸೋಂಕಿತರಲ್ಲಿ ಈ ವಯಸ್ಸಿವನವರು ಕಡಿಮೆಯೇ ಇದ್ದಾರೆನ್ನುವುದು ಮತ್ತು ಸೋಂಕಿತ ಮಕ್ಕಳಲ್ಲಿ ಸಾವುಗಳಾಗಿರುವುದು ತೀರಾ ಅಪರೂಪವೆನ್ನುವುದು ಮಕ್ಕಳಲ್ಲಿ ಸೋಂಕಾಗಲೀ, ಅದರ ಸಮಸ್ಯೆಗಳಾಗಲೀ ಬಲು ಕಡಿಮೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಮಕ್ಕಳಲ್ಲಿ ಗಂಭೀರ ಸಮಸ್ಯೆ, ಅವರಲ್ಲಿ ಮೂರನೇ ಅಲೆಯ ಭಯಂಕರ ಅಪಾಯ ಎಂಬ ಅಪಪ್ರಚಾರಗಳು, ಅದಕ್ಕಾಗಿ ಒಂದೂವರೆ ವರ್ಷ ಶಾಲೆ ಮುಚ್ಚುಗಡೆ, ಮತ್ತೀಗ ಶಾಲೆಗೆ ಹೋಗಬೇಕಾದರೆ ಮಕ್ಕಳಿಗೂ, ಹೆತ್ತವರಿಗೂ ಲಸಿಕೆ ಕಡ್ಡಾಯ ಇತ್ಯಾದಿ ನಿಯಮಗಳು ಎಲ್ಲವೂ ಯಾವುದೇ ಆಧಾರವಿಲ್ಲದವು, ಅತಾರ್ಕಿಕವಾದವು, ಅವೈಜ್ಞಾನಿಕವಾದವು ಎನ್ನುವುದು ಸ್ಪಷ್ಟವಾಗುತ್ತದೆ.

ಉಳಿದಂತೆ 21-30 ವಯೋಮಿತಿಯಲ್ಲಿ 23,247 ಸೋಂಕಿತ ಪ್ರಕರಣಗಳಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಇದು ಒಟ್ಟು ಮೃತಪಟ್ಟವರಲ್ಲಿ ಶೇ. 1.77 ಆಗುತ್ತದೆ. ಹಾಗೂ ಈ ವಯಸ್ಸಿನ ಕೊರೋನ ಸೋಂಕಿತರಲ್ಲಿ ಸಾವಿನ ಪ್ರಮಾಣವು ಶೇ. 0.12 ಆಗುತ್ತದೆ; 31ರಿಂದ 40 ವಯಸ್ಸಿನವರಲ್ಲಿ 20,643 ಮಂದಿಗೆ ಸೋಂಕು ತಗಲಿ, ಅವರಲ್ಲಿ ಮೃತರಾದವರು 94 ಮಂದಿಯಾಗಿದ್ದು,ಇದು ಒಟ್ಟು ಮೃತರಲ್ಲಿ ಶೇ.5.54 ಆಗುತ್ತದೆ, ಆ ವಯಸ್ಸಿನ ಒಟ್ಟು ಸೋಂಕಿತರ ಶೇ. 0.45 ಆಗುತ್ತದೆ. ಈ ಒಂದೂವರೆ ವರ್ಷದಲ್ಲಿ ಮೃತಪಟ್ಟ 1,694 ಮಂದಿಯಲ್ಲಿ 41 ವರ್ಷಕ್ಕೆ ಮೇಲ್ಪಟ್ಟವರ ಸಂಖ್ಯೆ 1,565 (ಶೇ. 92.4) ಆಗಿದೆ. ಅವರಲ್ಲಿ 41ರಿಂದ 50 ವರ್ಷದವರೆಗಿನ ಸೋಂಕಿತರಲ್ಲಿ ಸಾವಿನ ಪ್ರಮಾಣವು ಶೇ. 1.05, 51ರಿಂದ 60ರ ವಯೋಮಾನದಲ್ಲಿ ಶೇ.2.18, 61ರಿಂದ 70 ವರ್ಷದವರಲ್ಲಿ ಶೇ. 4.4, 71ರಿಂದ 80 ವರ್ಷದಲ್ಲಿ ಶೇ. 6.83, 81ರಿಂದ 90 ವರ್ಷ ವಯಸ್ಸಿನ ಸೋಂಕಿತರಲ್ಲಿ ಮೃತರ ಪ್ರಮಾಣ ಶೇ.8.09 ಮತ್ತು 91ಕ್ಕೆ ವರ್ಷ ಮೇಲ್ಪಟ್ಟವರಲ್ಲಿ ಶೇ. 8.47 ಆಗಿವೆ.

ಅಂದರೆ, ಜಿಲ್ಲೆಯಲ್ಲಿ ಕೊರೋನ ಕಾರಣದಿಂದ ಆಗಿರುವ ಶೇ.92ರಷ್ಟು ಸಾವುಗಳು 40 ವರ್ಷಕ್ಕೆ ಮೇಲ್ಪಟ್ಟವರಲ್ಲೇ ಆಗಿವೆ, ಮತ್ತು ವಯಸ್ಸು ಹೆಚ್ಚಿದ್ದವರಲ್ಲಿ ಸಾವಿನ ಪ್ರಮಾಣವು ಹೆಚ್ಚಿರುವುದು ಕಂಡುಬರುತ್ತದೆ. 80 ವರ್ಷಕ್ಕೆ ಮೇಲ್ಪಟ್ಟ ಸೋಂಕಿತರಲ್ಲೂ ಸಾವಿನ ಪ್ರಮಾಣವು ಶೇ.8ರಷ್ಟಿರುವುದರಿಂದ ಆ ವಯಸ್ಸಿನಲ್ಲೂ ಶೇ. 92ರಷ್ಟು ಸೋಂಕಿತರು ಕೊರೋನ ಸೋಂಕನ್ನು ಮಣಿಸಿ ಗೆದ್ದಿದ್ದಾರೆನ್ನುವುದು ಕೂಡ ಸ್ಪಷ್ಟವಾಗುತ್ತದೆ. ಸೋಂಕಿತರ ದಾಖಲಾಗದ ಪ್ರಕರಣಗಳನ್ನು ಕೂಡ ಪರಿಗಣಿಸಿದರೆ ಎಲ್ಲಾ ವಯೋಮಾನಗಳ ಸೋಂಕಿತರಲ್ಲೂ ಸಾವಿನ ಪ್ರಮಾಣಗಳು ಇನ್ನಷ್ಟು (10 ಪ್ಟಾದರೂ) ಕಡಿಮೆಯೇ ಆಗಿರಬಹುದು.

ಜಿಲ್ಲೆಯ ಅಂಕಿ ಅಂಶಗಳ ಪ್ರಕಾರ ಮೃತರಲ್ಲಿ ವ್ಯಾಕ್ಸಿನ್ ತೆಗೆದುಕೊಂಡ 42 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 23 ಮಂದಿ ಎರಡು ಡೋಸ್, 19 ಮಂದಿ ಒಂದು ಡೋಸ್ ಪಡೆದವರು ಎಂಬುದು ಕೂಡಾ ಇಲ್ಲಿ ಗಮನಾರ್ಹ.

ಕೊರೋನ ಸಹಜ ಕಾಯಿಲೆ

ಚೀನಾ, ಇಟಲಿ ರಾಷ್ಟ್ರಗಳ ತಜ್ಞರು, ವೈದ್ಯರು ಕಳೆದ ಫೆಬ್ರವರಿಯಲ್ಲಿ ಮಾಡಿರುವ ವರದಿಯ ರೂಪದಲ್ಲಿಯೇ ದ.ಕ. ಜಿಲ್ಲೆಯಲ್ಲಿಯೂ ಕೊರೋನ ವರ್ತಿಸಿದೆ. ಕೊರೋನದ ಆರಂಭದಲ್ಲೇ ಇದು ಅಪಾಯಕಾರಿ, ಮರಣ ಮೃದಂಗ, ಕೊರೋನ ಬಂದವರೆಲ್ಲಾ ಸಾಯುತ್ತಾರೆ ಎಂಬುದಾಗಿ ಜನರಲ್ಲಿ ಹುಟ್ಟಿಸಲಾಗಿದ್ದ ಭಯವನ್ನು ಈ ಅಂಕಿ ಅಂಶಗಳು ಸುಳ್ಳಾಗಿಸಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಎರಡನೇ ಅಲೆಗಿಂತ ಮೊದಲ ಅಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಿರಲು ಅರಿವಿನ ಕೊರತೆ ಕಾರಣ. ಚಿಕಿತ್ಸೆ ಸಮರ್ಪಕವಾಗಿ ದೊರೆಯದೆ ಗೊಂದಲ ನಿರ್ಮಾಣವಾದದ್ದು ಇನ್ನೊಂದು ಕಾರಣ. ಎರಡನೇ ಅಲೆಯಲ್ಲಿ ಅವೆಲ್ಲವೂ ಉತ್ತಮವಾಗಿದೆ. ವಯಸ್ಕರಲ್ಲಿ 81 ವರ್ಷ ಮೇಲ್ಪಟ್ಟವರಲ್ಲಿಯೂ ಶೇ.92ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ.

ಇನ್ನು ದ.ಕ. ಜಿಲ್ಲೆಯ ಈ ಹಿಂದಿನ ಸರಾಸರಿ ವಾರ್ಷಿಕ ಸಾವು ಹಾಗೂ ಕೊರೋನ ಅವಧಿಯಲ್ಲಿನ ಸಾವಿನ ಸಂಖ್ಯೆಯನ್ನು ಲೆಕ್ಕಾಚಾರ ಮಾಡಿದರೂ ಕೊರೋನ ಸಹಜ ಕಾಯಿಲೆಯಾಗಿಯೇ ವರ್ತಿಸಿರುವುದು ಕಂಡು ಬರುತ್ತದೆ. ಆದರೆ ಕೊರೋನ ಹೆಸರಿನಲ್ಲಿ ಮಾಧ್ಯಮ ಸೃಷ್ಟಿ ಮಾಡಿದ್ದ ಭಯ, ಆಗಿರುವ ಸಾಮಾಜಿಕ, ಆರ್ಥಿಕ ತೊಂದರೆಗಳಿಗೆ ಸ್ಪಷ್ಟೀಕರಣ ಏನಿದೆ? ಅಂಕಿಅಂಶಗಳನ್ನು ಗಮನಿಸಿದರೆ, ಎಲ್ಲಾ ವ್ಯವಸ್ಥೆಗಳನ್ನು ಹೆಚ್ಚು ವೈಜ್ಞಾನಿಕವಾಗಿ, ತಾಳ್ಮೆ, ಜಾಣ್ಮೆಯೊಂದಿಗೆ ನಿಭಾಯಿಸಲು ಸಾಧ್ಯವಿತ್ತು ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದ ವೈಜ್ಞಾನಿಕ ವಾಸ್ತವವನ್ನೇ ತೆರೆದಿಡುತ್ತಿದೆ.


ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಖ್ಯಾತ ತಜ್ಞ ವೈದ್ಯರು, ಮಂಗಳೂರು
http://srinivaskakkilaya.in

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News