ಬಾಬ್ರಿ ಮಸೀದಿ ಧ್ವಂಸ ದಿನದಂದು ʼಕೃಷ್ಣ ಜನ್ಮಸ್ಥಳʼದ ಕೂಗು: ಮಥುರಾ ಉದ್ವಿಗ್ನ

Update: 2021-12-06 09:43 GMT
Photo: Yaqut Ali/The Wire

ಮಥುರಾ: ಬಾಬ್ರಿ ಮಸೀದಿ ಧ್ವಂಸ ಘಟನೆಯ ವರ್ಷಾಚರಣೆಯ  ದಿನದಂದು ಉತ್ತರ ಪ್ರದೇಶದ ಮಥುರಾದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕೃಷ್ಣ ಜನ್ಮಭೂಮಿಯನ್ನು ಜಲಾಭಿಷೇಕದಿಂದ ಶುದ್ಧಗೊಳಿಸುತ್ತೇವೆಂದು ಹೇಳಿಕೊಂಡು ಹಿಂದು ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿದಿವೆ ಎಂದು ಹೇಳಲಾಗಿದೆ. "ಮಥುರಾ ಆಯೇಂಗೆ, ಮಾಖನ್‍ಚಡಾಯೇಂಗೆ" (ಮಥುರಾಗೆ ಆಗಮಿಸಿ ಕೃಷ್ಣನಿಗೆ ಬೆಣ್ಣೆ ಸಮರ್ಪಿಸುತ್ತೇವೆ) ಎಂಬ ಕುರಿತಾದ ಟ್ವೀಟುಗಳೂ ಟ್ರೆಂಡಿಂಗ್ ಆಗಿವೆ.

ನಾಲ್ಕು ಬಲಪಂಥೀಯ ಸಂಘಟನೆಗಳಾದ ಅಖಿಲ ಭಾರತ ಹಿಂದು ಮಹಾಸಭಾ, ಶ್ರೀ ಕೃಷ್ಣ ಜನ್ಮಭೂಮಿ ನಿರ್ಮಾಣ್ ನ್ಯಾಸ್, ನಾರಾಯಣಿ ಸೇನಾ ಮತ್ತು ಶ್ರೀಕೃಷ್ಣ ಮುಕ್ತಿ ದಳ ನವೆಂಬರ್ 16ರಂದು ಇಲ್ಲಿ ಕೃಷ್ಣನ ʼನಿಜವಾದ ಜನ್ಮಸ್ಥಳದಲ್ಲಿʼ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅನುಮತಿ ಕೋರಿದ್ದವು. ಕೃಷ್ಣನ ಜನ್ಮಸ್ಥಳ ದೇವಳದ ಹತ್ತಿರದಲ್ಲಿಯೇ ಇರುವ ಮಸೀದಿಯ ಒಳಗಡೆಯಿದೆ ಎಂದೂ ಈ ಸಂಘಟನೆಗಳು ಹೇಳಿಕೊಂಡಿದ್ದವು. ನಂತರ ತಮ್ಮ ನಿರ್ಧಾರದಿಂದ ಈ ಗುಂಪುಗಳು ಹಿಂದೆ ಸರಿದಿದ್ದವು.

ಆದರೂ ಪೊಲೀಸ್ ಇಲಾಖೆ ಮಥುರಾದಲ್ಲಿ ಕಟ್ಟೆಚ್ಚರ ವಹಿಸಿದ್ದು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಸೆಕ್ಷನ್ 144 ಕೂಡ ಜಾರಿಗೊಳಿಸಲಾಗಿದ್ದು. ಪೊಲೀಸರು ಫ್ಲ್ಯಾಗ್ ಮಾರ್ಚ್ ಕೂಡ ನಡೆಸಿದ್ದಾರೆ.

ದೇವಳ ಸಂಕೀರ್ಣವಿರುವ ಗೋವಿಂದ ನಗರದಲ್ಲಿ ಉದ್ವಿಗ್ನತೆಯಿರುವುದರಿಂದ ತಮ್ಮ ಅಂಗಡಿ ಮುಂಗಟ್ಟುಗಳು ಹೋಟೆಲುಗಳನ್ನು ತೆರೆಯಬೇಕೇ ಅಥವಾ ಬೇಡವೇ ಎಂಬ ಸಂದಿಗ್ಧತೆಯಲ್ಲಿ ಅವುಗಳ ಮಾಲೀಕರಿದ್ದಾರೆ. ಇನ್ನೊಂದೆಡೆ ಈದ್ಗಾ ಟ್ರಸ್ಟ್ ಅಧ್ಯಕ್ಷ ಝೆಡ್ ಹಸನ್ ಅವರು ಶಾಂತಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News