ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಜಾಮೀನು ಪ್ರಶ್ನಿಸಿದ ಎನ್‌ಐಎ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್

Update: 2021-12-07 07:22 GMT

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವಕೀಲೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರು 'ಡೀಫಾಲ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರು' ಎಂದು ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ ಎಂದು The Quint  ವರದಿ ಮಾಡಿದೆ.

ಸುಧಾ ಭಾರದ್ವಾಜ್ ಅವರು ಡೀಫಾಲ್ಟ್ ಜಾಮೀನಿಗೆ ಅರ್ಹರು ಎಂಬ ಉಚ್ಚ ನ್ಯಾಯಾಲಯದ ನಂಬಿಕೆಯಲ್ಲಿ  ತಪ್ಪಿದೆ  ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರು ವಾದಿಸಿದರು.

ಡೀಫಾಲ್ಟ್ ಜಾಮೀನು ನೀಡುವಾಗ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯಿದೆ, 1967 ರ ಕೆಲವು ಸೆಕ್ಷನ್‌ಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ವಾದಿಸಿ ತನಿಖಾ ಸಂಸ್ಥೆಯ ಸಲ್ಲಿಕೆಯನ್ನು ಪರಿಗಣಿಸುವಂತೆ ಅಮನ್ ಲೇಖಿ ಇಂದು ಸುಪ್ರೀಂ ಕೋರ್ಟ್ ಪೀಠಕ್ಕೆ ಮನವಿ ಮಾಡಿದರು.

ಆದಾಗ್ಯೂ, ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಎಸ್. ರವೀಂದ್ರ ಭಟ್ ಹಾಗೂ ಬೇಲಾ ಭಾಟಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಎನ್‌ಐಎಯ ವಾದಗಳಲ್ಲಿ ಯಾವುದೇ ಅರ್ಹತೆಯನ್ನು ಕಂಡುಕೊಂಡಿಲ್ಲ ಹಾಗೂ  ಬಾಂಬೆ ಹೈಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿತು.

2018 ರಿಂದ ಜೈಲಿನಲ್ಲಿರುವ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಡೀಫಾಲ್ಟ್ ಜಾಮೀನು ಮಂಜೂರು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News