ಚರ್ಚೆಯಾಗದೆ ವಿಧೇಯಕ ಅಂಗೀಕಾರವಾದರೆ, ಸಂಸತ್ತು ಶೀಘ್ರದಲ್ಲಿ ರಬ್ಬರ್ ಸ್ಟಾಂಪ್ ಆಗಲಿದೆ: ನಿವೃತ್ತ ನ್ಯಾ. ಚಂದ್ರು

Update: 2021-12-07 17:07 GMT

ಕೋಲ್ಕತಾ, ಡಿ. 7: ಚರ್ಚೆಯಾಗದೆ ವಿಧೇಯಕ ಅಂಗೀಕಾರವಾದರೆ ಸಂಸತ್ತು ಶೀಘ್ರದಲ್ಲಿ ರಬ್ಬರ್ ಸ್ಟಾಂಪ್ ಆಗಲಿದೆ ಎಂದು ‘ಜೈ ಭೀಮ್’ ಚಿತ್ರಕ್ಕೆ ಪ್ರೇರಣೆಯಾದ ಮದ್ರಾಸ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಕೃಷ್ಣಸ್ವಾಮಿ ಚಂದ್ರು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಜಾತಿ ಹಾಗೂ ಲಿಂಗ ಅಸಮಾನತೆಗೆ ಸಂಬಂಧಿಸಿ ಹಲವು ಮಹತ್ವದ ತೀರ್ಪುಗಳ ಹಿಂದಿನ ಶಕ್ತಿಯಾಗಿರುವ ಕೆ. ಚಂದ್ರು ಅವರು ಬಾಬರಿ ಮಸೀದಿ ಧ್ವಂಸದ 29ನೇ ವರ್ಷದ ಹಿನ್ನೆಲೆಯಲ್ಲಿ ಎಸ್ಎಫ್ಐ ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
 
‘‘ಚರ್ಚೆ ನಡೆಸದ ಸಂಸತ್ತು ಕೃಷಿ ಕಾಯ್ದೆಗಳನ್ನು ಅಂಗೀಕರಿಸಿತು. ರೈತರು ಪ್ರತಿಭಟನೆ ನಡೆಸಿದರು. ಸರಕಾರ ಕಾಯ್ದೆಗಳನ್ನು ರದ್ದುಗೊಳಿಸಿತು. ಜನರ ಹಿತಾಸಕ್ತಿ, ಜನಸಮೂಹ ಎದುರಿಸುವ ಬಿಕ್ಕಟ್ಟು ಮೊದಲಾದ ವಿಷಯಗಳು ಸಂಸತ್ತಿನಲ್ಲಿ ಚರ್ಚೆಯಾಗುತ್ತಿಲ್ಲ. ಇದು ಹೀಗೇ ಮುಂದುವರಿದರೆ, ಸಂಸತ್ತು ಶೀಘ್ರದಲ್ಲಿ ಸರಕಾರದ ರಬ್ಬರ್ ಸ್ಟಾಂಪ್ ಆಗಿ ಮಾರ್ಪಾಟಾಗಲಿದೆ’’ ಎಂದು ಅವರು ಹೇಳಿದರು.

ಯಾವುದೇ ನೇರ ಉಲ್ಲೇಖವನ್ನು ಮಾಡದೆ ಅವರು, ಮುಂದೊಂದು ದಿನ ಸಂಸತ್ತು ನಾಗಪುರದಿಂದ ನಡೆಯಲಿದೆ ಎಂದು ಹೇಳಿದರು.

ಪ್ರಸಕ್ತ ಭಾರತದಲ್ಲಿ ಸಮಾಜವಾದ ಎಂಬ ಪದ ಕಡತದಲ್ಲಿ ಮಾತ್ರ ಇದೆ ಎಂದು ಗಮನ ಸೆಳೆದ ಅವರು, ಈಗಿನ ಕೇಂದ್ರ ಸರಕಾರ ಬಡವರಿಗೆ ಹಾನಿಕರವಾದ ಆರ್ಥಿಕ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದರು. ‘‘ತಮಿಳುನಾಡಿನಂತಹ ರಾಜ್ಯಗಳಲ್ಲಿ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವನ್ನು ಖಂಡಿಸುವ ದಿನವಾಗಿ ಆಚರಿಸಲು ಅವಕಾಶವಿಲ್ಲ. ಇದು ಸಂವಿಧಾನದ ಆಶಯವನ್ನು ಹೇಗೆ ಉಲ್ಲಂಘಿಸಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ರಾಜ್ಯ ಆಡಳಿತ ಹೀಗೆ ಮುಂದುವರಿದರೆ ಭಾರತ ಕೆಲವೇ ವರ್ಷಗಳಲ್ಲಿ ದೀವಾಳಿಯಾಗಲಿದೆ’’ ಎಂದು ಅವರು ಪ್ರತಿಪಾದಿಸಿದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಜಾತ್ಯತೀತತೆಯನ್ನು ಎತ್ತಿಹಿಡಿಯುವ ಬದಲು ಬಹುಸಂಖ್ಯಾತ ರಾಜಕೀಯಕ್ಕೆ ಅನುಕೂಲವಾಗುವಂತೆ ಏಕ ರಾಷ್ಟ್ರ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದೆ ಎಂದು ಕೆ. ಚಂದ್ರು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News