ವಿದ್ಯಾರ್ಥಿನಿಯರ ಅತ್ಯಾಚಾರ ಪ್ರಕರಣ: ಶಾಲೆಯ ಶಿಕ್ಷಕರು, ಪ್ರಾಂಶುಪಾಲರ ಸಹಿತ ಎಲ್ಲಾ ಸಿಬ್ಬಂದಿ ವಿರುದ್ಧ ಕೇಸ್

Update: 2021-12-08 13:28 GMT

ಹೊಸದಿಲ್ಲಿ: ರಾಜಸ್ಥಾನದ ಆಲ್ವಾರ್ ಜಿಲ್ಲೆಯ  ಸರಕಾರಿ ಶಾಲೆಯೊಂದರ ಮೂವರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ನಡೆದಿದೆಯೆನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಾಲೆಯ ಎಲ್ಲಾ ಸಿಬ್ಬಂದಿಗಳ ವಿರುದ್ಧ ಮೂರು ಎಫ್‍ಐಆರ್ ದಾಖಲಾಗಿದೆ.

ಸಂತ್ರಸ್ತೆಯ ಕುಟುಂಬಗಳು ಮಂಗಳವಾರ ರಾತ್ರಿ ದಾಖಲಿಸಿದ ದೂರಿನ ಆಧಾರದ ಮೇಲೆ ಶಾಲೆಯ ಎಲ್ಲಾ 15 ಸಿಬ್ಬಂದಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದೆ ಎಂದು ಭಿವಾಡಿ ಎಸ್‍ಪಿ ರಾಮ್ ಮೂರ್ತಿ ಜೋಷಿ ತಿಳಿಸಿದ್ದಾರೆ.

ಶಾಲೆಯ ಒಂಬತ್ತು ಶಿಕ್ಷಕರು ಮತ್ತು ಪ್ರಾಂಶುಪಾಲರ ಹೆಸರುಗಳೂ ಎಫ್‍ಐಆರ್‍ನಲ್ಲಿ ಸೇರಿವೆ.  ಶಾಲೆಯಲ್ಲಿ  ಒಟ್ಟು ನಾಲ್ಕು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕೆಲ ವರದಿಗಳು ಹೇಳಿವೆ.

ತನ್ನ ಮೇಲೆ ಪ್ರಾಂಶುಪಾಲರು ಮತ್ತು ಮೂವರು ಶಿಕ್ಷಕರು ಒಂದು ವರ್ಷ ಕಾಲ ಅತ್ಯಾಚಾರ ನಡೆಸಿದ್ದಾರೆ ಹಾಗೂ  ಈ ಲೈಂಗಿಕ ದೌರ್ಜನ್ಯದ ವೀಡಿಯೋವನ್ನು ಇಬ್ಬರು ಶಿಕ್ಷಕಿಯರು ತೆಗೆದಿದ್ದಾರೆಂದು ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಹೆತ್ತವರಿಗೆ ತಿಳಿಸಿದ ನಂತರ ದೂರು ದಾಖಲಾಗಿತ್ತು.

ನಂತರ ಶಾಲೆಯ ಆರನೇ, ನಾಲ್ಕನೇ ಮತ್ತು ಮೂರನೇ ತರಗತಿಯ ಮೂವರು ಇತರ ವಿದ್ಯಾರ್ಥಿನಿಯರೂ ಇಂತಹುದೇ  ಆರೋಪ ಹೊರಿಸಿದ್ದರು. ತಮಗೆ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ನೀಡುವ ಆಮಿಷ  ಒಡ್ಡಲಾಗಿತ್ತು ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಆರೋಪಿಗಳೆಲ್ಲರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ,.

ಕಳೆದ  ವರ್ಷ ಇದೇ ಶಾಲೆಯ ಇನ್ನೊಂದು ಶಿಕ್ಷಕರ ವಿರುದ್ಧ  ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಆ ಸಂದರ್ಭ  ಎಲ್ಲಾ 15 ಸಿಬ್ಬಂದಿಯೂ ಆ ಶಿಕ್ಷಕರ ವಿರುದ್ಧ ಸಾಕ್ಷ್ಯ ನೀಡಿದ್ದರು. ಆ ಶಿಕ್ಷಕ ಈಗ ಜಾಮೀನಿನ ಮೇಲೆ  ಹೊರಬಂದಿದ್ದಾರೆ.  ಇದು ಸಾಕ್ಷ್ಯಗಳಿಗೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡುವ ಯತ್ನವೂ ಆಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವರ್ಷದ ಆರೋಪಿ ಶಿಕ್ಷಕ ಸಂತ್ರಸ್ತ ವಿದ್ಯಾರ್ಥಿನಿಯರ ಕುಟುಂಬಗಳ ಜತೆ ಠಾಣೆಗೂ ಆಗಮಿಸಿದ್ದರೆಂದು  ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News