×
Ad

ಸುಭಾಸ್‌ಚಂದ್ರ ಬೋಸ್‌ರಿಂದ ಬಿಪಿನ್ ರಾವತ್ ವರೆಗೆ... ವಿಮಾನ, ಹೆಲಿಕಾಪ್ಟರ್ ದುರಂತದಲ್ಲಿ ಬಲಿಯಾದ ರಾಷ್ಟ್ರನಾಯಕರು‌

Update: 2021-12-09 07:55 IST

ಹೊಸದಿಲ್ಲಿ: ಹೆಲಿಕಾಪ್ಟರ್ ದುರಂತದಲ್ಲಿ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ 11 ಉನ್ನತ ಸೇನಾ ಅಧಿಕಾರಿಗಳು ಜೀವ ಕಳೆದುಕೊಂಡಿದ್ದಾರೆ. ಆದರೆ ಇತಿಹಾಸವನ್ನು ಗಮನಿಸಿದರೆ ದೇಶದ ಹಲವು ಮಂದಿ ರಾಷ್ಟ್ರನಾಯಕರು ಇಂಥದ್ದೇ ದುರಂತಗಳಲ್ಲಿ ದಾರುಣ ಅಂತ್ಯ ಕಂಡಿರುವುದು ತಿಳಿದು ಬರುತ್ತದೆ.

ದೇಶದ ಸ್ವಾತಂತ್ರ್ಯ ಯೋಧ ಸುಭಾಸ್‌ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಹಲವು ವಿವಾದಗಳು ಇದ್ದರೂ, 1945ರಲ್ಲಿ ತೈವಾನ್‌ನಲ್ಲಿ ನಡೆದ ದುರಂತದಲ್ಲಿ ಮಡಿದಿರುವುದು ಇಂಥ ಪ್ರಥಮ ನಿದರ್ಶನ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪುತ್ರ ಸಂಜಯ್‌ ಗಾಂಧಿಯವರಿದ್ದ ಗ್ಲೈಡರ್ 1980ರಲ್ಲಿ ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ ಕೆಲ ಹೊತ್ತಿನಲ್ಲೇ ಪತನಗೊಂಡು ಸಂಜಯ್‌ ಗಾಂಧಿ ಮೃತಪಟ್ಟಿದ್ದರು.

ಪಂಜಾಬ್ ರಾಜ್ಯಪಾಲರಾಗಿದ್ದ ಸುರೇಂದ್ರನಾಥ್ ಹಾಗೂ ಅವರ ಕುಟುಂಬದ ಒಂಬತ್ತು ಮಂದಿ, 1994ರಲ್ಲಿ ಸರ್ಕಾರದ ಸೂಪರ್ ಕಿಂಗ್ ವಿಮಾನ ಪ್ರತಿಕೂಲ ಹವಾಮಾನದ ಪರಿಣಾಮ ಪರ್ವತಕ್ಕೆ ಡಿಕ್ಕಿಹೊಡೆದು ಸಂಭವಿಸಿದ ದುರಂತದಲ್ಲಿ ಮಡಿದಿದ್ದರು. ಮತ್ತೊಂದು ಭೀಕರ ವಾಯು ದುರಂತವೆಂದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರಿದ್ದ ಹೆಲಿಕಾಪ್ಟರ್ ಬೆಲ್ 430, 2009ರಲ್ಲಿ ಚಿತ್ತೂರು ಜಿಲ್ಲೆಯ ಅರಣ್ಯ ಮಧ್ಯೆ ಹಾರಾಡುತ್ತಿದ್ದಾಗ ಪತನಗೊಂಡು ರೆಡ್ಡಿ ಮೃತಪಟ್ಟಿದ್ದು. ಹೆಲಿಕಾಪ್ಟರ್ ನಾಪತ್ತೆಯಾದ 27 ಗಂಟೆಗಳ ಬಳಿಕ ಅವಶೇಷ ಪತ್ತೆಯಾಗಿತ್ತು.

2001ರಲ್ಲಿ ಕಾಂಗ್ರೆಸ್ ಮುಖಂಡ ಮಾಧವರಾವ್ ಸಿಂಧ್ಯಾ, ಕಾನ್ಪುರಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ನಡೆದ ಸೆಸ್ಸೆನಾ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡರೆ, ಲೋಕಸಭೆಯ ಸ್ಪೀಕರ್ ಹಾಗೂ ತೆಲುಗುದೇಶಂ ಮುಖಂಡ ಜಿಎಂಸಿ ಬಾಲಯೋಗಿ 2002ರಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಅಂತ್ಯ ಕಂಡರು.

ಹರ್ಯಾಣದ ವಿದ್ಯುತ್ ಖಾತೆ ಸಚಿವ ಹಾಗೂ ಖ್ಯಾತ ಉದ್ಯಮಿ, ಓ.ಪಿ.ಜಿಂದಾಲ್, ರಾಜ್ಯದ ಕೃಷಿ ಸಚಿವ ಸುರೇಂದ್ರ ಸಿಂಗ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ 2005ರಲ್ಲಿ ಸಹರಣಪುರ ಬಳಿ ಪತನಗೊಂಡು ಇಬ್ಬರೂ ಮೃತಪಟ್ಟಿದ್ದರು. 2011ರಲ್ಲಿ ಅರುಣಾಚಲ ಪ್ರದೇಶದ ಸಿಎಂ ದೋರ್ಜಿ ಖಂಡು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿ ಐದು ದಿನ ಕಳೆದ ಬಳಿಕ ಚೀನಾ ಗಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News