ಅಜ್ಞಾತವಾಸದಿಂದ ‘ಅರಣ್ಯ’ವಾಸದೆಡೆಗೆ ರವೀನಾ ಟಂಡನ್

Update: 2021-12-10 07:18 GMT

1990ರ ದಶಕದ ತಾರೆ ರವೀನಾ ಟಂಡನ್‌ಒಟಿಟಿ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ನೆಟ್‌ಫ್ಲಿಕ್ಸ್ ಸರಣಿಯ ‘ಅರಣ್ಯಕ್’ ಅವರ ಚೊಚ್ಚಲ ಸರಣಿ. ತನ್ನ ಮೊದಲ ಚಿತ್ರ ‘ಪತ್ತರ್ ಕೇ ಫೂಲ್’ನ 30 ವರ್ಷಗಳ ಬಳಿಕ ಅವರು ಈ ಹೊಸ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಮುಂಬರುವ ‘ಕೆಜಿಎಫ್: ಚಾಪ್ಟರ್ 2’ರಲ್ಲಿಯೂ ಟಂಡನ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ಚಾರುದತ್ತ್ ಆಚಾರ್ಯ ಮತ್ತು ರೋಹನ್ ಸಿಪ್ಪಿ ಬರೆದ ಹಾಗೂ ವಿನಯ್ ವೈಕುಲ್ ನಿರ್ದೇಶಿಸಿದ ಅರಣ್ಯಕ್‌ನಲ್ಲಿ ಟಂಡನ್ ಕಸ್ತೂರಿ ದೋಗ್ರ ಎಂಬ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿದ್ದಾರೆ. ಪರ್ವತದ ಪಕ್ಕದ ಪಟ್ಟಣವೊಂದರಿಂದ ಪ್ರವಾಸಿಗ ವ್ಯಕ್ತಿಯೊಬ್ಬರ ನಾಪತ್ತೆಯ ಬಗ್ಗೆ ಅವರು ತನಿಖೆ ನಡೆಸುತ್ತಾರೆ. ಪಾತ್ರವರ್ಗದಲ್ಲಿ ಪರಂಬ್ರತ ಚಟರ್ಜಿ, ಆಶುತೋಷ್ ರಾಣಾ, ಮೇಘನಾ ಮಲಿಕ್ ಮತ್ತು ಝಾಕಿರ್ ಹುಸೈನ್ ಇದ್ದಾರೆ.

ಇದು ಪ್ರಭಾವಿ ಸಾಮಾಜಿಕ ಸಂದೇಶವೊಂದರ ಜೊತೆಗೆ ಮನರಂಜನೆ ನೀಡಲು ನನಗೆ ಲಭಿಸಿದ ಉತ್ತಮ ಅವಕಾಶವಾಗಿದೆ ಎಂದು ರವೀನಾ ಟಂಡನ್ ಅಭಿಪ್ರಾಯ ಪಡುತ್ತಾರೆ. ‘‘ನೀವು ನನ್ನ ಹಿಂದಿನ ಚಿತ್ರಗಳನ್ನು ನೋಡಿದರೆ ನಾಯಕಿ ಪ್ರಧಾನ ಕತಾ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿರುವುದನ್ನು ನೀವು ಗಮನಿಸಿರಬಹುದು. ಸ್ವಲ್ಪವಾದರೂ ನಿಶ್ಚಿತ ಸಂದೇಶವಿರುವ ಚಿತ್ರಗಳನ್ನು ಮಾಡಲು ನಾನು ಪ್ರಯತ್ನಿಸುತ್ತಾ ಬಂದಿದ್ದೇನೆ.

‘ಅರಣ್ಯಕ್’ ಚಿತ್ರದಲ್ಲಿ ನಾನು ಮಾಡುವ ಕಸ್ತೂರಿ ದೋಗ್ರರ ಪಾತ್ರ ಮಹಿಳೆಯರ ಕನಸಾಗಿದೆ. ಮಹಿಳೆಯರು ಬಹುಮುಖಿ ಕೆಲಸಗಾರರು. ನಾವು ಶ್ರೇಷ್ಠ ತಾಯಂದಿರು, ಶ್ರೇಷ್ಠ ಮಗಳಂದಿರು ಮತ್ತು ಶ್ರೇಷ್ಠ ಪತ್ನಿಯಂದಿರಾಗಬೇಕೆಂದು ಬಯಸುತ್ತೇವೆ ಹಾಗೂ ನಮ್ಮ ಆಯ್ಕೆಯ ವೃತ್ತಿ ಬದುಕಿನಲ್ಲೂ ಉತ್ತಮ ನಿರ್ವಹಣೆ ನೀಡುತ್ತೇವೆ. ಕೆಲವು ಸಲ ಮನೆ ನಡೆಸುವುದಕ್ಕಿಂತ ಸಿನೆಮಾ ಸೆಟ್‌ನಲ್ಲಿರುವುದೇ ಹೆಚ್ಚು ಸಮಾಧಾನ ನೀಡುತ್ತದೆ ಎಂದು ನಾನು ಆಗಾಗ ನನ್ನ ಗಂಡ(ಚಿತ್ರ ವಿತರಕ ಅನಿಲ್ ತಂಡಾನಿ)ನಿಗೆ ಹೇಳುತ್ತಿರುತ್ತೇನೆ.

ನನಗೆ ಬೆಂಬಲ ನೀಡುವವರು ಇದ್ದಾರೆ. ಅದು ನನ್ನ ಅದೃಷ್ಟ. ಆದರೆ ಕಸ್ತೂರಿಯಂತಹ ಹೆಚ್ಚಿನ ಮಹಿಳೆಯರಿಗೆ ಬೆಂಬಲ ಇರುವುದಿಲ್ಲ. ಅವಳು ನನ್ನ ಹೃದಯವನ್ನು ತಟ್ಟಿದಳು. ಕೆಲಸ ಮಾಡುವ ಮಹಿಳೆಯರ, ಅದರಲ್ಲೂ ಮುಖ್ಯವಾಗಿ ಸಮವಸ್ತ್ರಧಾರಿ ಮಹಿಳೆಯರ ಕುಟುಂಬಗಳು ಕೂಡ ಜವಾಬ್ದಾರಿಯನ್ನು ಹೊರಬೇಕು ಹಾಗೂ ಆ ಮೂಲಕ ಇಂತಹ ಮಹಿಳೆಯರಿಗೆ ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಲು ಹಾಗೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಸಂದೇಶ ಹೊರಜಗತ್ತಿಗೆ ಹೋಗಬೇಕೆಂದು ನಾನು ಬಯಸಿದೆ’’ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. 30 ವರ್ಷಗಳ ಈ ಅವಧಿಯಲ್ಲಿ ಪ್ರೇಕ್ಷಕರ ಅಭಿರುಚಿಗಳು ಬದಲಾಗಿರುವ ಕುರಿತಂತೆಯೂ ಅವರಿಗೆ ಅರಿವಿದೆ. ‘‘ಪ್ರೇಕ್ಷಕರ ಗ್ರಹಿಕೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಒಟಿಟಿಯಿಂದಾಗಿ ನಮಗೆ ಜಾಗತಿಕ ಸಿನೆಮಾಗಳ ನಂಟು ಲಭಿಸಿದೆ ಹಾಗೂ ಇರಾನ್, ಕೊರಿಯ, ಸ್ಪೈನ್‌ನಲ್ಲಿ ಯಾವ ಚಿತ್ರಗಳು ತಯಾರಾಗುತ್ತಿವೆ ಎನ್ನುವ ಮಾಹಿತಿ ಈಗ ನಮ್ಮ ಬೆರಳ ತುದಿಯಲ್ಲಿದೆ. ಮೊದಲು ಇಂತಹ ಚಿತ್ರಗಳನ್ನು ನಾವು ಚಿತ್ರೋತ್ಸವಗಳು ಮತ್ತು ವಿದೇಶಗಳಿಂದ ಬರುವ ಡಿವಿಡಿಗಳಲ್ಲಿ ಮಾತ್ರ ನೋಡಬಹುದಾಗಿತ್ತು. ಈ ತಿಳುವಳಿಕೆಯಿಂದಾಗಿ ಪ್ರೇಕ್ಷಕರು ಈಗ ತಮ್ಮ ಪೂರ್ವಾಗ್ರಹ ಪೀಡಿತ ದೃಷ್ಟಿಕೋನಗಳಿಗೆ ಆತುಕೊಂಡು ಕುಳಿತಿಲ್ಲ. ನಿರ್ದೇಶಕರು ಕೂಡ ಎಲ್ಲ ರೀತಿಯ ಕತೆಗಳನ್ನು ಹೇಳಲು ಉತ್ಸುಕರಾಗಿದ್ದಾರೆ. ಪ್ರಯೋಗಗಳನ್ನು ಮಾಡುವ ಮೂಲಕ ತಾವು ಗುರಿಯಿರಿಸಿದ ಪ್ರೇಕ್ಷಕ ವರ್ಗವನ್ನು ತಲುಪಲು ಅವರು ಈಗ ಮುಂದಾಗಿದ್ದಾರೆ. ಈಗ ಅವರು ವಾಣಿಜ್ಯ ಸೂತ್ರದ ಅವಶ್ಯಕತೆಗಳಾದ ಐಟಮ್ ಡ್ಯಾನ್ಸ್‌ಗಳು ಮತ್ತು ಶುಕ್ರವಾರದ ಬಾಕ್ಸ್ ಆಫೀಸ್ ಒತ್ತಡಕ್ಕೆ ಬದ್ಧರಾಗಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News