ಸ್ಕ್ವಿಡ್‌ಗೇಮ್ ಪರಿಣಾಮ: ಕೊರಿಯನ್ ಭಾಷೆಯ ಮೇಲೆ ಹೆಚ್ಚುತ್ತಿರುವ ಆಸಕ್ತಿ!

Update: 2021-12-11 07:27 GMT

ಕನ್ನಡ ಭಾಷೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವುದಕ್ಕೆ ಸಿನೆಮಾ ಮಾಧ್ಯಮಗಳು ಅಥವಾ ಸಾಂಸ್ಕೃತಿಕ ಕ್ಷೇತ್ರಗಳು ನೀಡಬಹುದಾದ ಕೊಡುಗೆಗಳ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ. ಯಾಕೆಂದರೆ ಇಂದು ಸಿನೆಮಾ ಮಾಧ್ಯಮಗಳು ಭಾಷೆಯನ್ನು ಅತಿ ವೇಗವಾಗಿ ದೇಶದಿಂದ ದೇಶಕ್ಕೆ ಪಸರಿಸುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ. ತಮಿಳು ಭಾಷೆ ಇಂದು ಜಾಗತಿಕ ಮಟ್ಟವನ್ನು ತಲುಪಲು ಎ. ಆರ್. ರೆಹಮಾನ್‌ರಂತಹ ಪ್ರತಿಭಾವಂತರ ಕೊಡುಗೆಗಳನ್ನು ನಾವು ಮರೆಯಬಾರದು. ಇತರ ಭಾಷಿಕ ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್ ಯಾಕೆ ಆಗಬೇಕು ಎನ್ನುವುದನ್ನು ಇದು ಎತ್ತಿ ಹಿಡಿಯುತ್ತದೆ.

ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಭಾರೀ ಜನಪ್ರಿಯವಾಗಿರುವ ‘ಸ್ಕ್ವಿಡ್‌ಗೇಮ್’ ಎಲ್ಲ ದೇಶ, ಭಾಷೆಗಳ ಗಡಿ ಮೀರಿ ಜನರನ್ನು ತಲುಪಿತು. ಹಾಗೆಯೇ ಇಂದು ಕೊರಿಯನ್ ಪಾಪ್‌ನ ಬಗ್ಗೆಯೂ ವಿಶ್ವ ವಿಶೇಷ ಆಸಕ್ತಿಯನ್ನು ತೋರಿಸುತ್ತಿದೆ. ಕೊರಿಯನ್ ಥ್ರಿಲ್ಲರ್ ಸಿನೆಮಾಗಳು ಕೂಡ ಜನಪ್ರಿಯಗೊಳ್ಳುತ್ತಿವೆ. ಇದರ ಪರಿಣಾಮವಾಗಿ, ಕೊರಿಯನ್ ಭಾಷೆಯು ಭಾರತದ ಯುವಜನರನ್ನು ವ್ಯಾಪಕವಾಗಿ ಸೆಳೆಯುತ್ತಿದೆ ಎನ್ನುವುದನ್ನು ಅಧ್ಯಯನ ಹೇಳುತ್ತದೆ. ಗಣನೀಯ ಸಂಖ್ಯೆಯ ಭಾರತೀಯರು ಆ ಭಾಷೆಯನ್ನು ಕಲಿಯುವುದಕ್ಕೆ ಆಸಕ್ತಿ ತೋರುತ್ತಿದ್ದಾರೆಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ. ಭಾರತದಲ್ಲಿ ಕೊರಿಯನ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾಷೆಯಾಗಿದ್ದು ಬೆಳವಣಿಗೆಯಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ನಂತಹ ಪ್ರಮುಖ ಭಾಷೆಗಳನ್ನು ಹಿಂದಿಕ್ಕಿದೆ ಎಂದು ಜಾಗತಿಕ ಭಾಷಾ ಕಲಿಕಾ ಆ್ಯಪ್ ಡುವೊಲಿಂಗೊ ನಡೆಸಿದ ಸಮೀಕ್ಷೆ ತಿಳಿಸಿದೆ.

ಮುಂಬೈ, ದಿಲ್ಲಿ, ಬೆಂಗಳೂರು, ಚೆನ್ನೈ, ಕೋಲ್ಕತಾ, ಹೈದರಾಬಾದ್, ಪುಣೆ, ಅಹ್ಮದಾಬಾದ್ ಹಾಗೂ ಲಕ್ನೊ ನಗರದಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 18 ಹಾಗೂ 50 ವರ್ಷಗಳ ನಡುವಿನ 1,013 ಭಾರತೀಯರು ಭಾಗವಹಿಸಿದ್ದರು.

ಭಾರತದಲ್ಲಿ ತನ್ನ ಆ್ಯಪ್‌ನಲ್ಲಿ ಜನರು ಕಲಿಯುತ್ತಿರುವ ಭಾಷೆಗಳಲ್ಲಿ ಕೊರಿಯನ್ ಭಾಷೆಯು ಐದನೇ ಅತ್ಯಂತ ಜನಪ್ರಿಯ ಭಾಷೆಯಾಗಿದೆ ಎಂದು ಡುವೊಲಿಂಗೊ ಆ್ಯಪ್ ಕಂಪೆನಿಯು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಜನಪ್ರಿಯ ಕೊರಿಯನ್ ವೆಬ್ ಸರಣಿ ಸ್ಕ್ವಿಡ್‌ಗೇಮ್ ಬಿಡುಗಡೆಯ ಬಳಿಕ 17 ಹಾಗೂ 25 ವರ್ಷದ ನಡುವಿನ ವಯಸ್ಸಿನ ಭಾರತೀಯರು ಕೊರಿಯನ್ ಭಾಷೆಯನ್ನು ಕಲಿಯುವುದು ಹೆಚ್ಚಾಗಿದೆ ಎಂದರು ಡುವೊಲಿಂಗೊ ಹೇಳಿದೆ.ಅದೇ ರೀತಿ ಕೊರಿಯನ್ ಪಾಪ್ ಸಂಗೀತ ಕೂಡಾ ಆ ಭಾಷೆಯ ಜನಪ್ರಿಯತೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅದು ತಿಳಿಸಿದೆ.

ಆದಾಗ್ಯೂ ತನ್ನ ಆ್ಯಪ್‌ನಲ್ಲಿ ಅತ್ಯಧಿಕ ಸಂಖ್ಯೆಯ ಭಾರತೀಯ ಬಳಕೆದಾರರು ಕಲಿಯುತ್ತಿರುವ ಭಾಷೆಗಳ ಸಾಲಿನಲ್ಲಿ ಇಂಗ್ಲಿಷ್ ಈಗಲೂ ಅಗ್ರಸ್ಥಾನಿಯಾಗಿದೆ ಎಂದು ಡುವೊಲಿಂಗೊ ತಿಳಿಸಿದೆ. ಹಿಂದಿ, ಫ್ರೆಂಚ್, ಸ್ಪಾನಿಶ್ ಆನಂತರದ ಸ್ಥಾನಗಳಲ್ಲಿವೆ ಎಂದಿದೆ.

ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್, ಜರ್ಮನ್, ಜಪಾನಿ, ಇಟಾಲಿಯನ್, ಕೊರಿಯನ್, ಚೈನೀಸ್, ರಶ್ಯನ್ ಹಾಗೂ ಪೋರ್ಚುಗೀಸ್ ಈ ಆ್ಯಪ್ ಮೂಲಕ ಕಲಿಯಲಾಗುತ್ತಿರುವ ಟಾಪ್ 10 ಭಾಷೆಗಳಾಗಿವೆ.

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News