×
Ad

ದುಬೈನಲ್ಲಿ ಕಾಣೆಯಾಗಿದ್ದ ಮರಡೋನಾ ವಾಚ್ ಅಸ್ಸಾಂನಲ್ಲಿ ಪತ್ತೆ: 20 ಲಕ್ಷ ರೂ. ಮೌಲ್ಯದ ವಾಚ್ ಕದ್ದ ಆರೋಪಿಯ ಬಂಧನ

Update: 2021-12-11 16:06 IST

ಗುವಾಹಟಿ,ಡಿ. 5: ಯುಎಇನ ದುಬೈನಲ್ಲಿ ಕಳೆದುಹೋಗಿದ್ದ ಫುಟ್ಬಾಲ್ ಲೋಕದ ದಂತಕಥೆ ಡಿಯಾಗೊ ಮರಡೊನಾ ಅವರದ್ದೆನ್ನಲಾದ ಹ್ಯುಬ್ಲೊಟ್ ಕಂಪೆನಿಯ ದುಬಾರಿ ಹೆರಿಟೇಜ್ ವಾಚ್ ಶನಿವಾರ ಅಸ್ಸಾಂನಲ್ಲಿ ಪತ್ತೆಯಾಗಿರುವುದಾಗಿ ತಿಳಿದುಂದಿದೆ.

20 ಲಕ್ಷ ರೂ. ಮೌಲ್ಯದ ಈ ವಾಚನ್ನು ದುಬೈನಲ್ಲಿ ಉದ್ಯೋಗದಲ್ಲಿದ್ದ ಅಸ್ಸಾಂನ ನಿವಾಸಿಯೊಬ್ಬನಿಂದ ವಶಪಡಿಸಿಕೊಳ್ಳಲಾಗಿದೆ. ಆತ ಇತ್ತೀಚೆಗಷ್ಟೇ ಭಾರತಕ್ಕೆ ವಾಪಸಾಗಿದ್ದನೆಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ಈ ವಿಷಯವನ್ನು ಪ್ರಪ್ರಥಮವಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ‘‘ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಅಸ್ಸಾಂ ಪೊಲೀಸರು ಹಾಊ ದುಬೈ ಪೊಲೀಸರೊಂದಿಗೆ ಸಮನ್ವಯತೆಯಿಂದ ಕಾರ್ಯಾಚರಿಸಿ, ಪುಟ್ಬಾಲ್ ಆಟದ ದಂತಕತೆಯಾಗಿರುವ ದಿವಂಗತ ಡಿಯಾಗೊ ಮರಡೋನಾ ಅವರಿಗೆ ಸೇರಿದ ಹುಬ್ಲೋ ವಾಚನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಈ ಸಂಬಂಧ ವಾಝಿದ್ ಹುಸೈನ್ಎಂಬಾತನನ್ನು ಬಂದಿಸಿದ್ದಾರೆ. ಮುಂದಿನ ಕಾನೂನುಕ್ರಮವನ್ನು ಕೈಗೊಳ್ಳಲಾಗಿದೆ’’ಎಂದವರು ಟ್ವೀಟಿಸಿದ್ದಾರೆ.

ಅರ್ಜೆಂಟೀನಾದ ವೃತ್ತಿಪರ ಫುಟ್ಬಾಲ್ ಆಟಗಾರರಾಗಿದ್ದ ಡಿಯಾಗೋ ಮರಡೋ, ಪುಟ್ಬಾಲ್ ನ ಅತ್ಯಂತ ಶೇಷ್ಠ ಆಟಗಾರರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 2020ರ ನವೆಂಬರ್ ನಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದರು.

ಅಸ್ಸಾಂನಲ್ಲಿ ಪತ್ತೆಯಾಗಿರುವ ವಾಚ್ ಡಿಯಾಗೋ ಮರಡೋನಾ ಅವರದ್ದೆಂಬುದನ್ನು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ಅವರು ದೃಢಪಡಿಸಿದ್ದಾರೆ. ಈ ವಾಚನ್ನು ದುಬೈನಲ್ಲಿ ಇತರ ಸೊತ್ತುಗಳೊಂದಿಗೆ ಸುರಕ್ಷಿತವಾಗಿ ಇರಿಸಲಾಗಿತ್ತು. ವಾಝೀದ್ ಹುಸೈನ್ ಅವರು ಮರಡನೋನಾ ಸಹಿಯಿರುವ ಸೀಮಿತ ಆವೃತ್ತಿಯ ಹುಬ್ಲೋ ವಾಚನ್ನು ಅಲ್ಲಿಂದ ಅಪಹರಿಸಿದ ಸ್ವಲ್ಪ ಸಮಯದ ಬಳಿಕ ಆತ ಅಸ್ಸಾಂಗೆ ಆಗಮಿಸಿದ್ದನೆಂದು ಭಾಸ್ಕರ್ ಜ್ಯೋತಿ ಮಹಂತ ಹೇಳಿದ್ದಾರೆ. ಶನಿವಾರ ಬೆಳಗ್ಗೆ 4:00 ಗಂಟೆಯ ವೇಳೆಗೆ ವಾಝೀದ್ ಹುಸೈನ್ನನ್ನು ಸಿಬ್ಸಾಗರ್ನಲ್ಲಿರುವ ಆತನ ನಿವಾಸದಿಂದ ಬಂಧಿಸಲಾಗಿದ್ದು, ವಾಚನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮರಡೋನಾ ಅವರ ಸೊತ್ತುಗಳನ್ನು ಸಂಗ್ರಹಿಸಿಡಲಾದ ಖಾಸಗಿ ಕಂಪೆನಿಯೊಂದರಲ್ಲಿ ವಾಝೀದ್ ಹುಸೈನ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಆತ ಈ ವಾಚನ್ನು ಕದ್ದಿರಬೇಕೆಂದು ಶಂಕಿಸಲಾಗಿದೆ. ವಾಚ್ ಕಳವಾದ ಆನಂತರ ಸ್ವಲ್ಪ ಸಮಯದವರೆಗೆ ಅಲ್ಲಿ ಕೆಲಸ ಮಾಡಿದ್ದ ಆತ ಆಗಸ್ಟ್ ನಲ್ಲಿ ತನ್ನ ತಂದೆ ಅಸ್ವಸ್ಥರಾಗಿರುವದುರಿಂದ ಭಾರತಕ್ಕೆ ಹಿಂತಿರುಗಲು ಮಾಲಕ ಸಂಸ್ಥೆಯಿಂದ ಅನುಮತಿಯನ್ನು ಕೇಳಿದ್ದನೆಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ

2010 ಫಿಫಾ ವಿಶ್ವಕಪ್ ನಲ್ಲಿ ಮರಡೋನಾ ಧರಿಸಿದ್ದ ವಾಚ್

2010ರ ಫಿಫಾ ವಿಶ್ವಕಪ್‌ ಸಂದರ್ಭ ಡಿಯಾಗೊ ಮರಡೋನಾ ಅವರು ಹುಬ್ಲೋ ಕಂಪೆನಿಯ ಬಿಗ್ಬಾಂಗ್ ವಾಚ್ ಧರಿಸಿ ಗಮನಸೆಳೆದಿದ್ದರು. ಆ ವರ್ಷ ಹುಬ್ಲೋ ಕಂಪೆನಿಯು ‘ಮರಡೋನಾ ಬಿಗ್ಬ್ಯಾಂಗ್ ಕ್ರೊನೊಗ್ರಾಫ್’ ಸೀಮಿತ ಆವೃತ್ತಿಯ ವಾಚ್ ಗಳನ್ನು ಬಿಡುಗಡೆಗೊಳಿಸಿತ್ತು.ಇದರ ಬೆಲೆ 20 ಲಕ್ಷ ರೂ. ಆಗಿದೆ.

ವಾಚ್ ನಲ್ಲಿ ತನ್ನ ತೋಳುಗಳನ್ನು ಮೇಲಕ್ಕೆತ್ತಿ ವಿಜಯದ ಸಂಕೇತವನ್ನು ಪ್ರದರ್ಶಿಸುತ್ತಿರುವ ಡಿಯಾಗೋ ಮರಡೋನಾ ಅವರ ಫೋಟೋವನ್ನು ಅಳವಡಿಸಲಾಗಿದೆ. ಅದರಲ್ಲಿ ಮರಡೋನಾ ಅವ ಸಹಿ ಹಾಗೂ ಜೆರ್ಸಿಯ ಸಂಖ್ಯೆಯೂ ಇದೆ.

ಹ್ಯುಬ್ಲೊಟ್ ಮರಡೊನಾ ಬಿಗ್ಬ್ಯಾಂಗ್ ಕ್ರೊನೋಗ್ರಾಫ್ ವಾಚ್ 44.5 ಮೀಟರ್ ವ್ಯಾಸವನ್ನು ಹೊಂದಿದೆ. ಕಪ್ಪು ಸೆರಾಮಿಕ್ನಿಂದ ಅದನ್ನು ಸಂಯೋಜಿಸಲಾಗಿದೆ. ಕಪ್ಪುಬಣ್ಣದ ಡಯಲ್ನಲ್ಲಿ ನೀಲಮಣಿಯ ಹರಳನ್ನು ಅಳವಡಿಸಲಾಗಿದೆ. ವಾಚ್ನಲ್ಲಿರುವ ಅಂಕೆಗಳು ನೀಲಿ ಹಾಗೂ ಬಿಳಿ ಬಣ್ಣದಿಂದ ಹೊಳೆಯುತ್ತವೆ. ವಾಚ್ನ ಸಬ್ಡಯಲ್ನಲ್ಲಿ ಮರಡೋನಾ ಅವರ ಜೆರ್ಸಿ ಸಂಖ್ಯೆ 10ನ್ನು ಒಳಗೊಂಡಿದೆ. 55 ಜ್ಯುವೆಲ್ಗಳನ್ನು ಅದರಲ್ಲಿ ಅಳವಡಿಸಲಾಗಿದೆ ಹಾಗೂ 42 ತಾಸುಗಳ ಪವರ್ ರಿಸರ್ವ್ ಹೊಂದಿದೆ.
  
ಮರಡೋನಾ ಬಿಗ್ಬ್ಯಾಂಗ್ ಆವೃತ್ತಿಯ ಹ್ಯುಬ್ಲೊಟ್ ವಾಚ್ ನ 250 ಯೂನಿಟ್ ಗಳನ್ನು ಮಾತ್ರವೇ ಮಾರಾಟಕ್ಕೆ ಬಿಡುಗಡೆಗೊಳಿಸಲಾಗಿತ್ತು. ಫಿಫಾ 2010ರ ವಿಶ್ವಕಪ್ ಸಂದರ್ಭ ಅವೆಲ್ಲವೂ ದಿಢೀರಾಗಿ ಮಾರಾಟವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News