ನಕಲಿ ಎನ್ ಕೌಂಟರ್ ಗಳಿಗೆ ಆಸ್ಪದ ನೀಡುವುದಿಲ್ಲ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ
ಹೊಸದಿಲ್ಲಿ,ಡಿ.11: ನಕಲಿ ಎನ್ಕೌಂಟರ್ಗಳಿಗೆ ಅವಕಾಶವಿಲ್ಲ ಮತ್ತು ಸರಕಾರವು ತನ್ನ ಜನರಿಗೆ ಉತ್ತರದಾಯಿಯಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್.ಎಚ್.ಆರ್.ಸಿ.)ದ ಅಧ್ಯಕ್ಷ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ.ಅರುಣ ಮಿಶ್ರಾ ಅವರು ಹೇಳಿದ್ದಾರೆ.
ಶುಕ್ರವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಉಪಸ್ಥಿತಿಯಲ್ಲಿ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮಿಶ್ರಾ,ನ್ಯಾಯಾಂಗದಲ್ಲಿ ವಿಳಂಬಗಳಿಗಾಗಿ ಕಳವಳವನ್ನೂ ವ್ಯಕ್ತಪಡಿಸಿದರು.
ವ್ಯಕ್ತಿಗಳ ಹಕ್ಕುಗಳು ಸಂಪೂರ್ಣವಲ್ಲ,ಆದರೆ ಅವುಗಳನ್ನು ಸಾಮಾಜಿಕ ಸಂದರ್ಭದೊಂದಿಗೆ ಹೊಂದಿಸಬೇಕಾಗುತ್ತದೆ. ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಹೇಳಿದರು.
ವಿಳಂಬಿತ ನ್ಯಾಯದಿಂದಾಗಿ ಜನರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುತ್ತಾರೆ. ಕಾನೂನಿನ ಆಡಳಿತದಲ್ಲಿ ತ್ವರಿತ ನ್ಯಾಯದಾನ ಅಗತ್ಯವಾಗಿದೆ ಎಂದು ಹೇಳಿದ ಮಿಶ್ರಾ,ಸರಕಾರದ ಕಚೇರಿಗಳು ಮಾನವ ಹಕ್ಕು ಹೊಣೆಗಾರಿಕೆಗಳನ್ನು ನಿರ್ವಹಿಸುವಂತೆ, ಜನಕಲ್ಯಾಣಕ್ಕಾಗಿ ರೂಪಿಸಲಾಗಿರುವ ಕಾನೂನುಗಳು ಮತ್ತು ನೀತಿಗಳು ಕೇವಲ ಅಣಕವಾಗದೆ ಅವುಗಳು ಪಾಲನೆಯಾಗುವಂತೆ ಆಯೋಗವು ನೋಡಿಕೊಳ್ಳಲಿದೆ ಎಂದರು.
ಋಣಾತ್ಮಕತೆಯು ಭೀತಿ ಮತ್ತು ಹತಾಶೆಯನ್ನುಂಟು ಮಾಡುವ ಮಾನವ ಹಕ್ಕುಗಳ ಉಲ್ಲಂಘನೆಗಳ ಒಂದು ರೂಪವಾಗಿದೆ. ಧನಾತ್ಮಕತೆಯನ್ನು ಬೆಳೆಸುವುದು ವ್ಯಕ್ತಿಯ ಅಭಿವೃದ್ಧಿಗೆ ಮತ್ತು ದೇಶದ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ಮಿಶ್ರಾ ಹೇಳಿದರು.