×
Ad

ಮನೆಗಳಿಗೆ ಮರಳಲು ಆರಂಭಿಸಿದ ರೈತರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ

Update: 2021-12-11 20:12 IST
photo:PTI

ಚಂಡಿಗಡ,ಡಿ.11: ರೈತರು ಶನಿವಾರ ದಿಲ್ಲಿ ಗಡಿ ಸಮೀಪದ ಪ್ರತಿಭಟನಾ ತಾಣಗಳಿಂದ ಭಾರೀ ಸಂಖ್ಯೆಯ ಟ್ರಾಕ್ಟರ್‌ಗಳು ಮತ್ತು ಇತರ ವಾಹನಗಳಲ್ಲಿ ತಮ್ಮ ತವರು ರಾಜ್ಯಗಳಾದ ಪಂಜಾಬ ಮತ್ತು ಹರ್ಯಾಣಗಳಿಗೆ ಮರಳಲು ಆರಂಭಿಸಿದ್ದು, ದಿಲ್ಲಿ-ಸೋನೆಪತ್-ಕರ್ನಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯುಂಟಾಗಿತ್ತು. ಹೆದ್ದಾರಿಯಲ್ಲಿ ಉದ್ದನೆಯ ಸರದಿಗಳಲ್ಲಿ ವಾಹನಗಳು ಸಾಗುತ್ತಿದ್ದವು.

ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಗ್ರಾಮಗಳಲ್ಲಿ ರೈತ ಸಂಘಟನೆ ಸಂಯುಕ್ತ ಕಿಸಾನ ಮೋರ್ಚಾದ ಬಾವುಟಗಳನ್ನು ಹಿಡಿದಿದ್ದ ರೈತರು ಮತ್ತು ಇತರರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷದಿಂದಲೂ ನಡೆಸುತ್ತಿದ್ದ ಪ್ರತಿಭಟನೆಯಿಂದ ವಾಪಸ್ಸಾಗುತ್ತಿದ್ದ ರೈತರನ್ನು ಪುಷ್ಪವೃಷ್ಟಿ,ಹಾರಗಳು,ಲಡ್ಡೂಗಳು ಮತ್ತು ಬರ್ಫಿಗಳೊಂದಿಗೆ ಸ್ವಾಗತಿಸಿದರು.

ಮಾರ್ಗದುದ್ದಕ್ಕೂ ಅಲ್ಲಲ್ಲಿ ರೈತರಿಗಾಗಿ ಭೋಜನ ವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು.

ದಟ್ಟಣೆಯಿಂದಾಗಿ ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ. ಕೆಲವು ವಾಹನಗಳು ಹೆದ್ದಾರಿಯ ತಪ್ಪುಬದಿಗಳಿಂದ ಸಾಗಲು ಪ್ರಯತ್ನಿಸಿದ್ದು,ಸಂಚಾರ ಇನ್ನಷ್ಟು ವ್ಯತ್ಯಯಗೊಳ್ಳಲು ಕಾರಣವಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಅತ್ತ ದಿಲ್ಲಿ-ರೋಹ್ಟಕ್ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಭಾರೀ ಸಂಖ್ಯೆಯಲ್ಲಿ ರೈತರು ಮನೆಗಳಿಗೆ ಮರಳುತ್ತಿದ್ದರಿಂದ ಕೆಲವೆಡೆಗಳಲ್ಲಿ ವಾಹನಗಳು ಆಮೆವೇಗದಲ್ಲಿ ಸಾಗುವಂತಾಗಿತ್ತು. ಸಂಚಾರ ನಿರ್ವಹಣೆಗಾಗಿ ಹೆದ್ದಾರಿಗಳಲ್ಲಿ ವಿವಿಧ ಕಡೆಗಳಲ್ಲಿ ಹಲವಾರು ಪೊಲೀಸರನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News