ರೈತರ ಉಳಿವಿಗಾಗಿ ಮತಾಂತರ ಕಾಯ್ದೆ!

Update: 2021-12-12 04:10 GMT

‘‘ಮತಾಂತರ! ಮತಾಂತರ’’

ಎಲ್ಲಿ ನೋಡಿದರಲ್ಲಿ ಮತಾಂತರದ ಕೂಗು. ಅರೆ! ಮೊಗಲರ ಕಾಲದಲ್ಲಿ ಈ ಸಮಸ್ಯೆ ಇರಲಿಲ್ಲ. ಬ್ರಿಟಿಷರ ಕಾಲದಲ್ಲಿ ಈ ಸಮಸ್ಯೆ ಇರಲಿಲ್ಲ. ಯುಪಿಎ ಕಾಲದಲ್ಲೂ ಸಮಸ್ಯೆ ಇರಲಿಲ್ಲ. ಇದೀಗ ವಿಶ್ವ ಗುರು ಚೌಕೀದಾರರ ಕಾಲದಲ್ಲಿ ಇವರಿಗೆ ಮತಾಂತರ ಮಾಡುವ ಧೈರ್ಯ ಎಲ್ಲಿಂದ ಬಂತು ಎಂದು ಆಕ್ರೋಶಿತನಾದ ಪತ್ರಕರ್ತ ಎಂಜಲು ಕಾಸಿ ತನ್ನ ಜೋಳಿಗೆಯ ಜೊತೆಗೆ ಬೀದಿಗೆ ಬಂದ. ನೋಡಿದರೆ ಅಲ್ಲಿ ಒಂದಿಷ್ಟು ಮಂದಿ ಕೈಯಲ್ಲಿ ತ್ರಿಶೂಲ ಹಿಡಿದು ಓಡಾಡುತ್ತಿದ್ದರು.

ಯಾಕೋ ಕಾಸಿಯ ಗಂಟಲ ಪಸೆ ಆರತೊಡಗಿತು. ಆದರೂ ಧೈರ್ಯದಿಂದ ಹೆಜ್ಜೆ ಮುಂದಿಟ್ಟ. ಓರ್ವ ತ್ರಿಶೂಲ ಧಾರಿ ಕಾಸಿಯನ್ನು ತಡೆದ.

‘‘ಗಡ್ಡ ಇಟ್ಟಿದ್ದೀಯ? ಏನು ಮತಾಂತರಕ್ಕೆ ಹೊರಟಿದ್ದೀಯ?’’ ಕೇಳಿದ.

‘‘ಸಾರ್ ನನ್ನ ಹೆಸರು ಕಾಸೀ...’’

 ‘‘ಏನು ಕಾಸಿಂ? ....ಮತಾಂತರ ಮತಾಂತರ’’ ಆತ ಒಮ್ಮೆಲೆ ಅರಚತೊಡಗಿದ. ಅಷ್ಟರಲ್ಲಿ ತ್ರಿಶೂಲಧಾರಿ ಗುಂಪುಗಳು ಕಾಸಿಯನ್ನು ಸುತ್ತುವರಿದವು.

‘‘ಸಾರ್ ನಾನು ಕಾಸಿಂ ಅಲ್ಲ, ಎಂಜಲು ಕಾಸಿ...’’ ಕಾಸಿ ಅಲವತ್ತುಕೊಂಡ.

‘‘ಹಾಗಾದ್ರೆ ನಿನ್ನನ್ನು ಕಾಸಿಯಿಂದ ಕಾಸಿಂ ಆಗಿ ಮತಾಂತರ ಮಾಡಿರಬೇಕು...’’ ಒಮ್ಮೆಲೆ ಒಬ್ಬಾತ ಬೊಬ್ಬೆ ಹೊಡೆದ.

‘‘ಸಾರ್...ಹುಟ್ಟಿನಿಂದಲೇ ನಾನು ಎಂಜಲು ಕಾಸಿ ಸಾರ್. ಪತ್ರಕರ್ತ ಸಾರ್’’

‘‘ಇವನು ಪತ್ರಕರ್ತ. ನಮ್ಮವನೇ...ಬಿಟ್ಟು ಬಿಡಿ’’ ಯಾರೋ ಕೂಗಿದರು. ಅಷ್ಟೇ, ಅಲ್ಲಿಂದ ಬದುಕಿದೆಯ ಬಡ ಜೀವ ಎಂದು ಕಾಸಿ ನೇರ ವಿಧಾನಸೌಧದ ಕಡೆಗೆ ಓಡಿದ.

ನೇರ ಮುಖ್ಯಮಂತ್ರಿಯವರ ಮುಂದೆ ಹಲ್ಲುಗಿಂಜುತ್ತಾ ನಿಂತ. ಮುಖ್ಯಮಂತ್ರಿಯವರು ಸಿಟ್ಟಿನಿಂದ ‘ಏನ್ರೀ ನಿಮ್ಮದು...’’ ಎಂದರು. ಯಾಕೆಂದರೆ ಆಗಷ್ಟೇ ಅವರು ಯಡಿಯೂರಪ್ಪರ ಜೊತೆಗೆ ಫೋನಲ್ಲಿ ಮಾತನಾಡಿ ಅವರನ್ನು ರಮಿಸಿ ಸುಸ್ತಾಗಿದ್ದರು.

‘‘ಸಾರ್...ರೈತರ ಪರವಾಗಿ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸುತ್ತೀರಂತೆ...’’ ಕಾಸಿ ಕೇಳಿದ.

‘‘ಹೌದು. ಅದಕ್ಕಾಗಿ ಮತಾಂತರ ಕಾಯ್ದೆ ಜಾರಿಗೊಳಿಸುತ್ತಾ ಇದ್ದೇವೆ...’’ ಮುಖ್ಯಮಂತ್ರಿಯವರು ನುಡಿದರು.

‘‘ರೈತರಿಗೂ ಮತಾಂತರ ಕಾಯ್ದೆಗೂ ಏನು ಸಂಬಂಧ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ನೋಡ್ರಿ...ರೈತರು ಕೃಷಿ ಮಾಡುವುದಕ್ಕೆ ಹಿಂಜರಿಯುವುದರ ಹಿಂದೆ ಮತಾಂತರಿಗಳ ಕೈವಾಡ ಇದೆ...’’ ಮುಖ್ಯಮಂತ್ರಿಗಳು ರಹಸ್ಯವೊಂದನ್ನು ಬಿಚ್ಚಿಟ್ಟರು.

‘‘ಏನ್ ಸಾರ್ ಅದು? ’’

‘‘ಅದೇರಿ...ಭಾರೀ ಆಮಿಷ ತೋರಿಸಿ ರೈತರನ್ನು ಮತಾಂತರ ಮಾಡುತ್ತಿರುವುದರಿಂದ, ರೈತರು ಗದ್ದೆಯಲ್ಲಿ ದುಡಿಯಲು ಸಿದ್ಧರಿಲ್ಲ. ಆದುದರಿಂದ ಕೃಷಿ ಕ್ಷೇತ್ರವನ್ನು ಉಳಿಸಲು ಮತಾಂತರ ಕಾಯ್ದೆಯನ್ನು ಜಾರಿಗೆ ತರುತ್ತಿದ್ದೇವೆ...’’

‘‘ಸಾರ್...ರೈತರಿಗೆ ಹಣದ ಆಮಿಷ ತೋರಿಸಿ ಅವರ ಭೂಮಿಯನ್ನು ಅಂಬಾನಿ, ಅದಾನಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದಲ್ಲವೆ ವರದಿಗಳಿರುವುದು...’’ ಕಾಸಿ ತನ್ನ ಗೊಂದಲ ತೋಡಿಕೊಂಡ.

‘‘ಅದೆಲ್ಲ ವಿದೇಶಿ ಮಿಷನರಿಗಳು ಹರಡುತ್ತಿರುವ ವದಂತಿ. ಅದಾನಿ, ಅಂಬಾನಿಗಳು ನಮ್ಮ ದೇಶದ ಇಬ್ಬರು ಪ್ರಮುಖ ರೈತರು. ರೈತರು ರೈತರನ್ನು ಮತಾಂತರಗೊಳಿಸಿದರೆ ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ...ಇಂದು ದೇಶದ ರೈತರ ಎಲ್ಲ ಸಮಸ್ಯೆಗಳಿಗೂ ಮತಾಂತರವೇ ಕಾರಣ...’’ ಮುಖ್ಯಮಂತ್ರಿ ಘೋಷಿಸಿದರು.

‘‘ಸಾರ್...ಈ ಮತಾಂತರ ಕಾಯ್ದೆ ಪಕ್ಷಾಂತರಿಗಳಿಗೂ ಅನ್ವಯವಾಗುತ್ತದೆಯೆ?’’ ಕಾಸಿ ಮೆಲ್ಲಗೆ ಕೆಣಕಿದ.

‘‘ಯಾವ ಪಕ್ಷಾಂತರಿಗಳಿಗೆ...’’ ಮುಖ್ಯಮಂತ್ರಿಗಳು ಒಮ್ಮೆಲೆ ಬೆಚ್ಚಿ ಕೇಳಿದರು.

‘‘ಅದೇ ಸಾರ್...ಹಣದ ಆಮಿಷ ತೋರಿಸಿ ಪಕ್ಷಾಂತರ ಮಾಡುತ್ತಾರಲ್ಲ...ಅವರಿಗೆ?’’

‘‘ಪಕ್ಷಗಳಿಗೆ ಧರ್ಮ ಅನ್ವಯವಾಗಲ್ಲರೀ...’’

‘‘ಅಂದರೆ ರಾಜಕಾರಣಿಗಳಿಗೆ ಅಧರ್ಮ ಮಾತ್ರ ಅನ್ವಯ ಆಗತ್ತೆ ಅಂತೀರಾ?’’

‘‘ನಾನೀಗ ಹಾಗೆ ಹೇಳಿದ್ನಾ...?’’

‘‘ಧರ್ಮ ಅನ್ವಯವಾಗಲ್ಲ ಅಂದ್ರೆ, ಅಧರ್ಮ ಅನ್ವಯವಾಗತ್ತೆ ಅಂತ ತಾನೆ ಸಾರ್...? ಹೋಗಲಿ...ರಿಝ್ವಿ ಅವರು ಮತಾಂತರ ಆದರಲ್ಲ, ಅದಕ್ಕೆ ನಿಮ್ಮ ಕಾಯ್ದೆ ಅನ್ವಯವಾಗುತ್ತದೆಯೆ?’’

‘‘ರಿಝ್ವಿಯವರಿಗಾಗಿಯೇ ನಾವು ವಿಶೇಷ ಮರಳಿ ಮಾತೃ ಧರ್ಮಕ್ಕೆ ಕಾಯ್ದೆಯನ್ನು ತರುತ್ತಿದ್ದೇವೆ. ಮಾತೃ ಧರ್ಮಕ್ಕೆ ಮರಳಿರುವುದರಿಂದ ಅದು ಮತಾಂತರವಾಗುವುದಿಲ್ಲ...’’

‘‘ಸಾರ್...ರಿಝ್ವಿಯವರು ಮತಾಂತರಗೊಂಡು ಮೇಲ್‌ಜಾತಿಗೆ ಸೇರಿದ್ದಾರೆ. ಈ ಅವಕಾಶವನ್ನು ದಲಿತರಿಗೂ ನೀಡುವುದಕ್ಕಾಗಿ ಒಂದು ಕಾಯ್ದೆ ಮಾಡಬಹುದಲ್ಲ...’’ ಕಾಸಿ ಕೇಳಿದ.

ಕಾಸಿಯನ್ನು ದುರುಗುಟ್ಟಿ ನೋಡಿದ ಮುಖ್ಯಮಂತ್ರಿಯವರು ‘‘ಏನ್ರೀ...ಮೇಲ್‌ಜಾತಿಗೆ ಅವರನ್ನು ಸೇರಿಸಿ, ಅವರಿಗೆ ಸಿಗುತ್ತಿರುವ ಮೀಸಲಾತಿಗಳನ್ನು ಕಸಿಯಬೇಕು ಅಂತಿದ್ದೀರಾ? ನಿಮ್ಮ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಬೇಕಾಗುತ್ತದೆ...ದಲಿತರನ್ನು ದಲಿತರನ್ನಾಗಿಸಿಯೇ ಉಳಿಸಿ ಅವರ ಹಕ್ಕುಗಳನ್ನು ಕಾಪಾಡುವುದು ನಮ್ಮ ಧ್ಯೇಯ. ಅವರನ್ನು ಮೇಲ್‌ಜಾತಿಗೆ ಮತಾಂತರಿಸುವುದೂ ಮತಾಂತರ ಕಾಯ್ದೆಯಡಿಯಲ್ಲಿ ತಪ್ಪಾಗುತ್ತದೆ. ಮೇಲ್‌ಜಾತಿ ಎನ್ನುವ ಆಮಿಷ ಅಲ್ಲಿ ಕೆಲಸ ಮಾಡುವುದರಿಂದ ದಲಿತರ ಮತಾಂತರ ಕಾನೂನು ಪ್ರಕಾರ ಸಿಂಧುವಾಗುವುದಿಲ್ಲ’’

‘‘ಸಾರ್...ದಲಿತರನ್ನು ಅಸ್ಪಶ್ಯವಾಗಿ ನೋಡುವ ಮೇಲ್‌ಜಾತಿಗಳನ್ನು ಮನುಷ್ಯರಾಗಿ ಮತಾಂತರಗೊಳಿಸುವ ಕಾನೂನು ಜಾರಿಗೆ ಬರುವ ಸಾಧ್ಯತೆಯಿದೆಯಾ?’’

‘‘ಸದ್ಯಕ್ಕೆ ಪ್ರಶ್ನೆ ಕೇಳುವ ಪತ್ರಕರ್ತರ ಬಾಯಿ ಹೊಲಿಯುವುದಕ್ಕಾಗಿಯೇ ಒಂದು ವಿಶೇಷ ಕಾಯ್ದೆ ಜಾರಿಗೊಳಿಸಲಿದ್ದೇವೆ...’’ ಮುಖ್ಯಮಂತ್ರಿಗಳು ಹೀಗೆ ಹೇಳುತ್ತಿದ್ದಂತೆಯೇ ಕಾಸಿಗೆ ಅರ್ಥವಾಗಿ, ಅವನು ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ.

*ಚೇಳಯ್ಯ

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News