ಸಾರ್ವಜನಿಕ ರಂಗದ ಬ್ಯಾಂಕ್ ಗಳಲ್ಲಿ 41,177ಕ್ಕೂ ಅಧಿಕ ಖಾಲಿ ಹುದ್ದೆಗಳು: ಕೇಂದ್ರ
ಹೊಸದಿಲ್ಲಿ, ಡಿ. 12: ಡಿಸೆಂಬರ್ 1ರ ವರೆಗೆ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ ಮಂಜೂರಾದ ಒಟ್ಟು ಹುದ್ದೆಗಳಲ್ಲಿ 41,177ಕ್ಕೂ ಅಧಿಕ ಅಥವಾ ಶೇ. 5 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಹೇಳಿದ್ದಾರೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ ಖಾಲಿರುವ 8,05,986 ಕ್ಕೂ ಅಧಿಕ ಹುದ್ದೆಗಳನ್ನು ಮಂಜೂರು ಮಾಡಿತ್ತು. ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅತ್ಯಧಿಕ ಸಂಖ್ಯೆಯ 8,544 ಹುದ್ದೆಗಳು ಖಾಲಿ ಇವೆ ಎಂದು ಅಧಿಕೃತ ದತ್ತಾಂಶ ಹೇಳಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ದೊಡ್ಡ ಮಟ್ಟದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಸರಕಾರಕ್ಕೆ ಅರಿವಿದೆಯೇ ? ಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದರು. 1.12.2021ರ ವರೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 8,05,986 ಹುದ್ದೆಗಳು ಮಂಜೂರಾಗಿವೆ ಹಾಗೂ ಅದರಲ್ಲಿ 41,177 ಹುದ್ದೆಗಳು ಖಾಲಿ ಇವೆ ಎಂದು ಸೀತಾರಾಮ್ ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದರು. ಈ ಹುದ್ದೆಗಳನ್ನು ಮೂರು ವರ್ಗಗಳಲ್ಲಿ ವಿಭಾಗಿಸಲಾಗಿದೆ. ಅಧಿಕಾರಿ, ಗುಮಾಸ್ತ ಹಾಗೂ ಉಪ ಸಿಬ್ಬಂದಿ. ಒಟ್ಟು 12 ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಇವೆ. ಎಸ್ಬಿಐಯಲ್ಲಿ 8,544 ಹುದ್ದೆಗಳು ಖಾಲಿ ಇವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 6,743 ಹುದ್ದೆಗಳು ಖಾಲಿ ಇವೆ ಎಂದು ಅವರು ಹೇಳಿದರು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,295 ಹುದ್ದೆಗಳು, ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನಲ್ಲಿ 5,112 ಹುದ್ದೆಗಳು ಹಾಗೂ ಬ್ಯಾಂಕ್ ಆಫ್ ಇಂಡಿಯಾದಲ್ಲಿ 4,848 ಹುದ್ದೆಗಳು ಖಾಲಿ ಇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.