ಕಳೆದ 3 ವರ್ಷಗಳಲ್ಲಿ ಇಂಧನಗಳ ಮೇಲಿನ ತೆರಿಗೆಯಿಂದ ಸರಕಾರ 8 ಲಕ್ಷ ಕೋಟಿ ರೂ. ಗಳಿಸಿದೆ: ನಿರ್ಮಲಾ ಸೀತಾರಾಮನ್

Update: 2021-12-15 05:57 GMT

ಹೊಸದಿಲ್ಲಿ: ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಪೆಟ್ರೋಲ್ ಹಾಗೂ  ಡೀಸೆಲ್ ಮೇಲೆ ವಿಧಿಸಿದ ತೆರಿಗೆಯಿಂದ ಸರಕಾರ ಸುಮಾರು ರೂ. 8 ಲಕ್ಷ ಕೋಟಿ ಆದಾಯ ಗಳಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ತಿಗೆ ತಿಳಿಸಿದರು.

ಒಟ್ಟು ಮೊತ್ತದ ಪೈಕಿ 2020-21ನೇ ಸಾಲಿನಲ್ಲೇ  ರೂ 3.71 ಲಕ್ಷ ಕೋಟಿಗೂ ಹೆಚ್ಚುಆದಾಯ  ಸಂಗ್ರಹವಾಗಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಅಕ್ಟೋಬರ್ 5, 2018 ರಂದು ಲೀಟರ್‌ಗೆ ರೂ. 19.48 ರಿಂದ ನವೆಂಬರ್ 4, 2021 ಕ್ಕೆ ರೂ. 27.90 ಕ್ಕೆ ಏರಿಕೆಯಾಗಿದೆ. ಅದೇ ಅವಧಿಯಲ್ಲಿ ಡೀಸೆಲ್ ಮೇಲಿನ ಸುಂಕವು ಲೀಟರ್‌ಗೆ ರೂ. 15.33 ರಿಂದ ರೂ. 21.80 ಕ್ಕೆ ಏರಿದೆ ಎಂದು ಇಂಧನ ಬೆಲೆಗಳ ಮೇಲಿನ ಅಬಕಾರಿ ಸುಂಕ ಏರಿಕೆಯ ವಿವರಗಳನ್ನು ನೀಡುವಾಗ ಸೀತಾರಾಮನ್ ಹೇಳಿದರು.

"ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್ ಹಾಗೂ  ಡೀಸೆಲ್‌ನಿಂದ ಸಂಗ್ರಹಿಸಲಾದ ಸೆಸ್ ಸೇರಿದಂತೆ ಕೇಂದ್ರ ಅಬಕಾರಿ ಸುಂಕಗಳು: 2018-19 ರಲ್ಲಿ ರೂ 2,10,282 ಕೋಟಿ, 2019-20 ರಲ್ಲಿ ರೂ. 2,19,750 ಕೋಟಿ ಮತ್ತು 2020-21 ರಲ್ಲಿ ರೂ 3,71,908 ಕೋಟಿ  ಆಗಿದೆ" ಎಂದು ಹಣಕಾಸು ಸಚಿವರು ಹೇಳಿದರು.

ಈ ವರ್ಷ ನವೆಂಬರ್ 4 ರಂದು ದೀಪಾವಳಿಗೆ ಮುನ್ನ ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ರೂ. 5 ಮತ್ತು ರೂ. 10  ಕಡಿತಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News