ಕಳೆದ ಮೂರು ವರ್ಷಗಳಲ್ಲಿ ಯುಎಪಿಎ ಅಡಿ ಬಂಧನಗಳ ಪೈಕಿ ಶೇ 50ಕ್ಕೂ ಹೆಚ್ಚಿನವರು 30 ವರ್ಷಕ್ಕಿಂತ ಕೆಳಗಿನವರು: ಕೇಂದ್ರ

Update: 2021-12-15 09:12 GMT

ಹೊಸದಿಲ್ಲಿ: ದೇಶದಲ್ಲಿ 2018 ಹಾಗೂ 2020 ನಡುವೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧನಕ್ಕೊಳಗಾದವರ ಪೈಕಿ ಶೇ 50ಕ್ಕೂ ಹೆಚ್ಚಿನವರು 30 ವರ್ಷಕ್ಕಿಂತ ಕೆಳಗಿನವರು ಎಂದು ಸಂಸತ್ತಿಗೆ ಮಂಗಳವಾರ ಕೇಂದ್ರ ಸರಕಾರ ಮಾಹಿತಿ ನೀಡಿದೆ.

ಸಂಸದರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಸಚಿವಾಲಯ ನೀಡಿದ ಉತ್ತರದಲ್ಲಿ ಮೇಲಿನ ಮಾಹಿತಿ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಈ ಕಾಯಿದೆಯಡಿ 4,690 ಜನರನ್ನು ಬಂಧಿಸಲಾಗಿದೆ. ಇವರ ಪೈಕಿ 2,501 ಮಂದಿ ಅಥವಾ ಶೇ 53.32ರಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಗರಿಷ್ಠ 1,338 ಬಂಧನಗಳು ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಡೆದಿವೆ. ಇವುಗಳ ಪೈಕಿ 931 ಮಂದಿ ಅಥವಾ ಶೇ 69.5ರಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

ಯುಎಪಿಎ ಬಂಧನಗಳಲ್ಲಿ ಉತ್ತರ ಪ್ರದೇಶದ ನಂತರ ಮಣಿಪುರ ಎರಡನೇ ಸ್ಥಾನದಲ್ಲಿದ್ದು ಇಲ್ಲಿ ಕಳೆದ ಮೂರು ವರ್ಷಗಳಲ್ಲಿ 943 ಮಂದಿಯನ್ನು ಬಂಧಿಸಲಾಗಿದೆ. ಇವರ ಪೈಕಿ 499 ಮಂದಿ 30 ವರ್ಷಕ್ಕಿಂತ ಕೆಳಗಿನವರು.

ಜಮ್ಮು ಕಾಶ್ಮೀರ ಮೂರನೇ ಸ್ಥಾನದಲ್ಲಿದ್ದು 750 ಮಂದಿಯನ್ನು ಈ ಕಾಯಿದೆಯಡಿ ಬಂಧಿಸಲಾಗಿದ್ದು ಇವರ ಪೈಕಿ 366 ಮಂದಿ 30 ವರ್ಷಕ್ಕಿಂತ ಕೆಳಗಿನವರು ಎಂದು ಮಾಹಿತಿಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News