ಜೈಲಿನಲ್ಲಿರುವ ಮಗನ ಬಗ್ಗೆ ಕೇಳಿದ ಪತ್ರಕರ್ತರನ್ನು ಅವಾಚ್ಯವಾಗಿ ನಿಂದಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ

Update: 2021-12-15 18:48 GMT

ಹೊಸದಿಲ್ಲಿ,ಡಿ.15: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನವನ್ನು ನುಗ್ಗಿಸಿದ ಆರೋಪದಲ್ಲಿ ತನ್ನ ಪುತ್ರ ಆಶಿಷ್ ಮಿಶ್ರಾ ಜೈಲುಪಾಲಾಗಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂಬ ತನ್ನ ಮೇಲಿನ ಒತ್ತಡ ಹೆಚ್ಚುತ್ತಿರುವ ಮಧ್ಯೆಯೇ ಕೇಂದ್ರ ಸಹಾಯಕ ಗೃಹಸಚಿವ ಅಜಯ ಮಿಶ್ರಾ ಅವರು ತನ್ನ ಮಗನ ಬಗ್ಗೆ ಪ್ರಶ್ನಿಸಿದ್ದ ಪತ್ರಕರ್ತನೋರ್ವನ ಮೇಲೆ ಮುಗಿಬಿದ್ದ ಮತ್ತು ಮಾಧ್ಯಮಗಳನ್ನು ನಿಂದಿಸುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಆಶಿಷ್ ವಿರುದ್ಧ ಹೊಸ ಆರೋಪಗಳನ್ನು ಹೊರಿಸಿರುವ ತನಿಖಾ ವರದಿಯ ಕುರಿತು ಪತ್ರಕರ್ತನೋರ್ವ ಪ್ರಶ್ನಿಸಿದಾಗ,ಇಂತಹ ಮೂರ್ಖ ಪ್ರಶ್ನೆಗಳನ್ನು ಕೇಳಬೇಡ. ನಿನಗೆ ತಲೆ ಕೆಟ್ಟಿದೆಯೇ ಎಂದು ಮಿಶ್ರಾ ಕೂಗಾಡಿದ್ದು ವೀಡಿಯೊದಲ್ಲಿ ದಾಖಲಾಗಿದೆ. ಪತ್ರಕರ್ತನ ಕೈಯಲ್ಲಿದ್ದ ಮೈಕ್‌ ಅನ್ನೂ ಅವರು ಕಿತ್ತುಕೊಂಡಿದ್ದರು. ವರದಿಗಾರರನ್ನು ‘ಕಳ್ಳರು’ಎಂದೂ ಅವರು ಕರೆದಿದ್ದರು.
ಮಂಗಳವಾರ ಲಖಿಂಪುರ ಖೇರಿ ಜೈಲಿನಲ್ಲಿ ತನ್ನ ಮಗನನ್ನು ಭೇಟಿಯಾದ ಬಳಿಕ ಆಮ್ಲಜನಕ ಸ್ಥಾವರವೊಂದನ್ನು ಉದ್ಘಾಟಿಸಿದ ಸಂದರ್ಭ ಈ ಘಟನೆ ನಡೆದಿತ್ತು.
ಅ.3ರಂದು ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆ ಪೂರ್ವಯೋಜಿತವಾಗಿತ್ತು ಎಂದು ವಿಶೇಷ ತನಿಖಾ ತಂಡವು ತನ್ನ ವರದಿಯಲ್ಲಿ ಹೇಳಿದ ಬಳಿಕ ಮಿಶ್ರಾರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಬೇಕೆಂಬ ಪ್ರತಿಪಕ್ಷಗಳ ಆಗ್ರಹ ಇನ್ನಷ್ಟು ತೀವ್ರಗೊಂಡಿದೆ.
‘ಮಿಶ್ರಾ ರಾಜೀನಾಮೆ ನೀಡಬೇಕು ಎಂದು ನಾವು ಬಯಸಿದ್ದೇವೆ,ಆದರೆ ಪ್ರಧಾನಿ ಸಿದ್ಧರಿಲ್ಲ. ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡಂತೆ ಮಿಶ್ರಾರನ್ನು ವಜಾಗೊಳಿಸುವುದೂ ಸರಕಾರಕ್ಕೆ ಅನಿವಾರ್ಯವಾಗಲಿದೆ ’ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸಂಸತ್ತಿನಲ್ಲಿ ವರದಿಯ ಮೇಲೆ ಚರ್ಚೆಗಾಗಿ ಅವರು ನೋಟಿಸನ್ನು ಸಲ್ಲಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News